- Kannada News Photo gallery Cricket photos IPL 2024: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಂಬೈ ಇಂಡಿಯನ್ಸ್
IPL 2024: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಂಬೈ ಇಂಡಿಯನ್ಸ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 14ನೇ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಅತೀ ಹೆಚ್ಚು ಪಂದ್ಯಗಳನ್ನಾಡಿದ ವಿಶೇಷ ಮೈಲುಗಲ್ಲನ್ನು ಮುಟ್ಟುವ ಮೂಲಕ ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ಹೆಸರಿಗೆ ಸೇರ್ಪಡೆಯಾದ ಹೊಸ ದಾಖಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on: Apr 02, 2024 | 5:54 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಹ್ಯಾಟ್ರಿಕ್ ಸೋಲಿನ ನಡುವೆ ಎಂಬುದು ವಿಶೇಷ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ನಲ್ಲಿ 250 ಪಂದ್ಯಗಳನ್ನು ಪೂರೈಸಿದೆ. ಈ ಮೂಲಕ ಐಪಿಎಲ್ನಲ್ಲಿ 250 ಪಂದ್ಯಗಳನ್ನಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾತ್ರವಾಗಿದೆ.

2008 ರಿಂದ 2024 ರವರೆಗೆ 250* ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗೆಯೇ 138 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, 108 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳು ಫಲಿತಾಂಶರಹಿತವಾಗಿತ್ತು.

ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ತಂಡಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಆರ್ಸಿಬಿ ಇದುವರೆಗೆ 244 ಪಂದ್ಯಗಳನ್ನಾಡಿದ್ದು, ಈ ಬಾರಿಯ ಐಪಿಎಲ್ ಮೂಲಕ 250 ಮ್ಯಾಚ್ಗಳ ಸಾಧನೆ ಮಾಡಲಿದೆ.

ಹಾಗೆಯೇ ಮೂರನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ 241 ಪಂದ್ಯಗಳನ್ನಾಡಿದೆ. ಅಲ್ಲದೆ ಈ ಬಾರಿಯ ಐಪಿಎಲ್ನಲ್ಲಿ 9 ಪಂದ್ಯಗಳನ್ನಾಡಿದರೆ, 250 ಪಂದ್ಯಗಳ ಸಾಧನೆ ಮಾಡಿದ ತಂಡಗಳ ಪಟ್ಟಿಗೆ ಸೇರಲಿದೆ.

ಪಂಜಾಬ್ ಕಿಂಗ್ಸ್ ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದುವರೆಗೆ 239 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಈ ಬಾರಿಯ ಐಪಿಎಲ್ ಮೂಲಕ 250 ಪಂದ್ಯಗಳ ದಾಖಲೆ ಪಟ್ಟಿಗೆ ಸೇರ್ಪಡೆಯಾಗಲಿದೆ.
























