
IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟೋಟಕ ಬ್ಯಾಟರ್ ಶಿವಂ ದುಬೆ (Shivam Dube) ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ. ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ 34 ರನ್ ಬಾರಿಸಿದ್ದ ದುಬೆ, ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದುಬೆ 23 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 51 ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ತಮ್ಮ ಭರ್ಜರಿ ಫಾರ್ಮ್ ಅನ್ನು ಐಪಿಎಲ್ನಲ್ಲೂ ಮುಂದುವರೆಸಿದ್ದಾರೆ.

ಇದಕ್ಕೂ ಮುನ್ನ ಜನವರಿಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ದುಬೆ, ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 60 ರನ್ ಬಾರಿಸಿ ಮಿಂಚಿದ್ದರು. ಅಲ್ಲದೆ ಅಫ್ಘಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 32 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 63 ರನ್ ಚಚ್ಚಿದ್ದರು. ಇದಲ್ಲದೆ ಎರಡು ಪಂದ್ಯಗಳಿಂದ 2 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಈ ಮೂಲಕ ಶಿವಂ ದುಬೆ ತಮ್ಮ ಆಲ್ರೌಂಡರ್ ಆಟದೊಂದಿಗೆ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಐಪಿಎಲ್ನಲ್ಲೂ ಸಂಚಲನ ಸೃಷ್ಟಿಸುವ ಮೂಲಕ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಒಂದು ವೇಳೆ ಪಾಂಡ್ಯ ಈ ಬಾರಿಯ ಐಪಿಎಲ್ನಲ್ಲಿ ವಿಫಲರಾದರೆ ಶಿವಂ ದುಬೆಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

ಏಕೆಂದರೆ ಕಳೆದ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದ ಪಾಂಡ್ಯ ಫಿಟ್ನೆಸ್ ಸಮಸ್ಯೆಯ ಕಾರಣ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಹೀಗಾಗಿ ಟಿ20 ವಿಶ್ವಕಪ್ಗೂ ಮುನ್ನ ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ.

ಆದರೆ ಅದಕ್ಕೂ ಮುನ್ನವೇ ಇತ್ತ ಶಿವಂ ದುಬೆ ಅಬ್ಬರ ಶುರು ಮಾಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲೇ 6 ಸಿಕ್ಸ್ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಹೆಚ್ಚಿಸಬಲ್ಲೇ ಎಂಬುದನ್ನು ಸಾರಿ ಹೇಳಿದ್ದಾರೆ.

ಶಿವಂ ದುಬೆ ಈ ಅದ್ಭುತ ಪ್ರದರ್ಶನವನ್ನು ಹೀಗೆ ಮುಂದುವರೆಸಿದರೆ, ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ. ಒಟ್ಟಿನಲ್ಲಿ ದುಬೆ ದರ್ಬಾರ್ನೊಂದಿಗೆ ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಪಾಲಿಗೆ ಖಾಯಂ ಆಗಿದ್ದ ಆಲ್ರೌಂಡರ್ ಸ್ಥಾನ ಅಲುಗಾಡಲಾರಂಭಿಸಿದಂತು ನಿಜ.