
ಸೌತ್ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕೇಶವ್ ಮಹಾರಾಜ್ (Keshav Maharaj) ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಮಾರ್ಚ್ 17 ರಂದು ಭಾರತಕ್ಕೆ ಆಗಮಿಸಿದ್ದ ಮಹಾರಾಜ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಬಿಡುವು ಮಾಡಿಕೊಂಡು ಅಯೋಧ್ಯಗೆ ತೆರಳಿ ಬಾಲರಾಮನ ದರ್ಶನ ಪಡೆದುಕೊಂಡಿದ್ದಾರೆ. ಈ ಸಂತಸವನ್ನು ಕೇಶವ್ ಮಹಾರಾಜ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಬಾಲರಾಮನ ಪ್ರಾಣ ಪ್ರತಿಷ್ಠಾಪಣಾ ದಿನದಂದು ಕೇಶವ್ ಮಹಾರಾಜ್ ಶುಭ ಹಾರೈಸಿದ್ದರು. ಅಲ್ಲದೆ ಮುಂದಿನ ಬಾರಿ ಭಾರತಕ್ಕೆ ಭೇಟಿ ನೀಡಿದಾಗ ಶ್ರೀರಾಮನ ದರ್ಶನ ಪಡೆಯುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಅಯೋಧ್ಯೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಸೌತ್ ಆಫ್ರಿಕಾ ತಂಡ ಭಾರತಕ್ಕೆ ಸರಣಿ ಆಡಲು ಬಂದಾಗ ಕೇಶವ್ ಮಹಾರಾಜ್ ತಿರುವನಂತಪುರದ ಪ್ರಸಿದ್ಧ ದೇವಾಲಯ ಪದ್ಮನಾಭಸ್ವಾಮಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದುಕೊಂಡಿದ್ದಾರೆ.

ಅಂದಹಾಗೆಯೇ ಕೇಶವ್ ಮಹಾರಾಜ್ ಭಾರತೀಯ ಮೂಲದ ಸೌತ್ ಆಫ್ರಿಕಾ ಕ್ರಿಕೆಟಿಗ. ಸೌತ್ ಆಫ್ರಿಕಾ ಪರ 127 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು ಒಟ್ಟು 237 ವಿಕೆಟ್ ಕಬಳಿಸಿದ್ದಾರೆ.

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಮಹಾರಾಜ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.