ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ (ಮಾ.22) ಆರಂಭವಾಗಲಿರುವ 17ನೇ ಆವೃತ್ತಿಯ ಟೂರ್ನಿಯಿಂದ ಇದುವರೆಗೆ 10 ಆಟಗಾರರು ಹಿಂದೆ ಸರಿದಿದ್ದಾರೆ. ಈ ಸ್ಥಾನಗಳಲ್ಲಿ ಏಳು ಪ್ಲೇಯರ್ಸ್ ಬದಲಿ ಆಟಗಾರರಾಗಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...
ಜೇಕ್ ಪ್ರೇಸರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಇಂಗ್ಲೆಂಡ್ನ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ವೈಯುಕ್ತಿಕ ಕಾರಣಗಳಿಂದಾಗಿ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿಗೆ ಆಸ್ಟ್ರೇಲಿಯಾದ ಯುವ ದಾಂಡಿಗ ಜೇಕ್ ಪ್ರೇಸರ್ ಡೆಲ್ಲಿ ಬಳಗವನ್ನು ಕೂಡಿಕೊಂಡಿದ್ದಾರೆ.
ಸಂದೀಪ್ ವಾರಿಯರ್: ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಹಿಮ್ಮಡಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೀಗಾಗಿ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇದೀಗ ಅವರ ಸ್ಥಾನದಲ್ಲಿ ಸಂದೀಪ್ ವಾರಿಯರ್ ಗುಜರಾತ್ ಟೈಟಾನಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶಮರ್ ಜೋಸೆಫ್: ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿದಿರುವ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಅವರ ಬದಲಿ ಆಟಗಾರನಾಗಿ ಶಮರ್ ಜೋಸೆಫ್ LSG ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕ್ವೆನಾ ಮಫಕಾ: ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಶ್ರೀಲಂಕಾ ತಂಡದ ಎಡಗೈ ವೇಗಿ ದಿಲ್ಶನ್ ಮಧುಶಂಕ ಗಾಯದ ಕಾರಣ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನದಲ್ಲಿ ಇದೀಗ ಮುಂಬೈ ಇಂಡಿಯನ್ಸ್ ತಂಡವು ಸೌತ್ ಆಫ್ರಿಕಾದ ಯುವ ವೇಗಿ ಕ್ವೆನಾ ಮಫಕಾ ಅವರನ್ನು ಆಯ್ಕೆ ಮಾಡಿಕೊಂಡಿದೆ.
ದುಷ್ಮಂತ ಚಮೀರಾ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ ಬಿಕರಿಯಾಗದೇ ಉಳಿದಿದ್ದರು. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗುಳಿದಿರುವ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಬದಲಿ ಆಟಗಾರನಾಗಿ ದುಷ್ಮಂತ ಚಮೀರಾ KKR ತಂಡಕ್ಕೆ ಆಯ್ಕೆಯಾಗಿದ್ದಾರೆ.
ಲೂಕ್ ವುಡ್: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಇಂಗ್ಲೆಂಡ್ ವೇಗಿ ಲೂಕ್ ವುಡ್ ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ತಂಡದಲ್ಲಿದ್ದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆಂಡ್ರಾಫ್ ಅವರ ಕಾಲಿಗೆ ಗಾಯವಾಗಿದ್ದು, ಹೀಗಾಗಿ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಇದೀಗ ಲೂಕ್ ವುಡ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಫಿಲ್ ಸಾಲ್ಟ್: ಐಪಿಎಲ್ 2024 ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದ ಇಂಗ್ಲೆಂಡ್ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಬಿಡ್ಡಿಂಗ್ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಫಿಲ್ ಸಾಲ್ಟ್ KKR ಎಂಟ್ರಿ ಕೊಟ್ಟಿದ್ದಾರೆ.
ಹಾಗೆಯೇ ಗಾಯಗೊಂಡಿರುವ ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್), ರಾಬಿನ್ ಮಿಂಝ್ (ಗುಜರಾತ್ ಟೈಟಾನ್ಸ್) ಹಾಗೂ ಲುಂಗಿ ಎನ್ಗಿಡಿ (ಡೆಲ್ಲಿ ಕ್ಯಾಪಿಟಲ್ಸ್) ಐಪಿಎಲ್ನಿಂದ ಹೊರಗುಳಿದಿದ್ದು, ಇವರ ಬದಲಿ ಆಟಗಾರರನ್ನು ಇನ್ನೂ ಸಹ ಹೆಸರಿಸಲಾಗಿಲ್ಲ.
Published On - 2:53 pm, Thu, 21 March 24