- Kannada News Photo gallery Cricket photos From 1st over to 1st impact player many firsts of IPL history
IPL: ಐಪಿಎಲ್‌ನ ಹಲವು ಮೊದಲುಗಳು
IPL: ಐಪಿಎಲ್ 17ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಕಳೆದ 16 ಆವೃತ್ತಿಗಳಲ್ಲಿ ಒಂದಿಲ್ಲೊಂದು ಹೊಸ ಘಟನೆಗಳು ನಡೆಯುತ್ತಲ್ಲೇ ಬಂದಿವೆ. ಅದರಂತೆ 16 ಐಪಿಎಲ್ ಆವೃತ್ತಿಗಳಲ್ಲಿ ಘಟಿಸಿದ ಮೊದಲುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Updated on:Mar 21, 2024 | 6:26 PM

ಮೊದಲ ಚೆಂಡು: ಐಪಿಎಲ್‌ನ ಮೊದಲ ಎಸೆತವನ್ನು ಆರ್ಸಿಬಿ ವೇಗಿ ಪ್ರವೀಣ್ ಕುಮಾರ್ ಬೌಲ್ಡ್ ಮಾಡಿದ್ದರು. ಈ ಎಸೆತವನ್ನು ಎದುರಿಸಿದ ಕೆಕೆಆರ್ ಬ್ಯಾಟರ್ ಸೌರವ್ ಗಂಗೂಲಿ ಲೆಗ್ ಬೈ ಮೂಲಕ ಸಿಂಗಲ್ ಪಡೆದಿದ್ದರು.

ಮೊದಲ ಫೋರ್: ಐಪಿಎಲ್‌ನಲ್ಲಿ ಮೊದಲ ಬೌಂಡರಿ ಬಾರಿಸಿದ ಬ್ಯಾಟರ್ ಬ್ರೆಂಡನ್ ಮೆಕಲಮ್. ಜಹೀರ್ ಖಾನ್ ಎಸೆತವನ್ನು ಮಿಡ್‌ವಿಕೆಟ್‌ನಲ್ಲಿ ಫೋರ್‌ಗಟ್ಟುವ ಮೂಲಕ ಮೆಕಲಮ್ ಐಪಿಎಲ್‌ನ ಮೊದಲ ಬೌಂಡರಿ ಹೊಡೆದಿದ್ದರು.

ಮೊದಲ ಸಿಕ್ಸ್: ಐಪಿಎಲ್‌ನ ಮೊದಲ ಸಿಕ್ಸರ್ ಬಾರಿಸಿದ ದಾಖಲೆಯೂ ಮೆಕಲಮ್ ಹೆಸರಿನಲ್ಲಿದೆ. ಜಹೀರ್ ಅವರ ಮೊದಲ ಓವರ್‌ನ ನಾಲ್ಕನೇ ಎಸೆತವನ್ನು ಮೆಕಲಮ್ ಥರ್ಡ್ ಮ್ಯಾನ್ ಬೌಂಡರಿ ಮೇಲೆ ಸಿಕ್ಸರ್ಗಟ್ಟಿದ್ದರು.

ಮೊದಲ ವಿಕೆಟ್: ಐಪಿಎಲ್‌ನ ಮೊದಲ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಆರ್‌ಸಿಬಿಯ ಜಹೀರ್ ಖಾನ್ ಪಾತ್ರರಾಗಿದ್ದಾರೆ. ಅವರು ಕೆಕೆಆರ್ನ ಸೌರವ್ ಗಂಗೂಲಿ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು.

ಮೊದಲ ಅರ್ಧಶತಕ: ಐಪಿಎಲ್‌ನಲ್ಲಿ 50 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ದಾಖಲೆಯೂ ಮೆಕಲಮ್ ಹೆಸರಿನಲ್ಲಿದೆ. ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮೆಕಲಮ್ ಆರ್ಸಿಬಿ ವಿರುದ್ಧ ಕೇವಲ 32 ಎಸೆತಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು.

ಮೊದಲ ಶತಕ: ಅರ್ಧಶತಕದ ಜೊತೆಗೆ ಮೊದಲ ಶತಕ ಬಾರಿಸಿದ ದಾಖಲೆಯೂ ಮೆಕಲಮ್ ಹೆಸರಿನಲ್ಲಿದೆ. ಆರ್ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಮೇಕಲಮ್ ಕೇವಲ 53 ಎಸೆತಗಳಲ್ಲಿ ಐಪಿಎಲ್‌ನ ಮೊದಲ ಶತಕ ಸಿಡಿಸಿದ್ದರು.

ಮೊದಲು ರನ್ ಔಟ್: ಆರ್‌ಸಿಬಿಯ ಆಶ್ಲೇ ನೋಫ್ಕೆ ಐಪಿಎಲ್‌ನಲ್ಲಿ ರನ್ ಔಟ್ ಆದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಮೊದಲ ಮೇಡನ್ ಓವರ್: ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ ಗ್ಲೆನ್ ಮೆಕ್‌ಗ್ರಾತ್ ಐಪಿಎಲ್‌ನ ಮೊದಲ ಮೇಡನ್ ಓವರ್ ಬೌಲ್ ಮಾಡಿದ ಬೌಲರ್ ಆಗಿದ್ದಾರೆ. 2008 ರ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ತರುವರ್ ಕೊಹ್ಲಿ ಮತ್ತು ಶೇನ್ ವ್ಯಾಟ್ಸನ್ ವಿರುದ್ಧ ಅವರು ಮೊದಲ ಮೇಡನ್ ಓವರ್ ಬೌಲ್ ಮಾಡಿದ್ದರು. ತರುವಾರ್ ಮೂರನೇ ಎಸೆತದಲ್ಲಿ ಔಟಾದರೆ, ವ್ಯಾಟ್ಸನ್ ಕೊನೆಯ ಮೂರು ಎಸೆತಗಳಲ್ಲಿ ಶೂನ್ಯ ರನ್ ಬಾರಿಸಿದ್ದರು.

ಮೊದಲ ಸ್ಟಂಪಿಂಗ್: ಉದ್ಘಾಟನಾ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ರಾಬಿನ್ ಉತ್ತಪ್ಪ ಸ್ಟಂಪ್ಡ್ ಔಟ್ ಆದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೀಸನ್ನ ಐದನೇ ಪಂದ್ಯದಲ್ಲಿ ಆರ್ಸಿಬಿ ಬೌಲರ್ ಬಾಲಚಂದ್ರ ಅಖಿಲ್ ಅವರ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಮಾರ್ಕ್ ಬೌಚರ್, ಉತ್ತಪ್ಪರನ್ನು ಸ್ಟಂಪ್ ಔಟ್ ಮಾಡಿದ್ದರು.

ಮೊದಲ ಐದು ವಿಕೆಟ್: ರಾಜಸ್ಥಾನ ರಾಯಲ್ಸ್‌ನ ಸೊಹೈಲ್ ತನ್ವೀರ್ ಐಪಿಎಲ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕೇವಲ 14 ರನ್‌ಗಳಿಗೆ ಆರು ವಿಕೆಟ್ ಉರುಳಿಸಿದ್ದರು.

ಮೊದಲ ಹ್ಯಾಟ್ರಿಕ್: ಸಿಎಸ್‌ಕೆ ಪರ ಆಡಿದ್ದ ಲಕ್ಷ್ಮೀಪತಿ ಬಾಲಾಜಿ ಮೊದಲ ಬಾರಿಗೆ ಐಪಿಎಲ್ ಹ್ಯಾಟ್ರಿಕ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧದ ಕೊನೆಯ ಓವರ್‌ನಲ್ಲಿ ಅವರು ಸತತ ಮೂರು ವಿಕೆಟ್ ಪಡೆದಿದ್ದರು.

ಮೊದಲ ಐಪಿಎಲ್ ಚಾಂಪಿಯನ್: ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್‌ನ ಉದ್ಘಾಟನಾ ಸೀಸನ್ನ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಮೊದಲ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಮೊದಲ ಆರೆಂಜ್ ಕ್ಯಾಪ್: ಪಂಜಾಬ್ ತಂಡದ ಆರಂಭಿಕ ಬ್ಯಾಟರ್ ಶಾನ್ ಮಾರ್ಷ್ ಮೊದಲ ಆರೆಂಜ್ ಕ್ಯಾಪ್ ಗೆದ್ದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು ಆಡಿದ 11 ಪಂದ್ಯಗಳಿಂದ 68.44 ಸರಾಸರಿಯಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಒಳಗೊಂಡಂತೆ 616 ರನ್ ಬಾರಿಸಿದ್ದರು.

ಮೊದಲ ಪರ್ಪಲ್ ಕ್ಯಾಪ್: ರಾಜಸ್ಥಾನ ರಾಯಲ್ಸ್ ತಂಡದ ತನ್ವೀರ್ 2008 ರ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದರು. ಅವರು ಆಡಿದ 11 ಪಂದ್ಯಗಳಿಂದ 12.09 ಸರಾಸರಿಯಲ್ಲಿ 22 ವಿಕೆಟ್ಗಳನ್ನು ಉರುಳಿಸಿದ್ದರು.

ಮೊದಲ ಸೂಪರ್ ಓವರ್: 2ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮೊದಲ ಸೂಪರ್ ಓವರ್ ನಡೆದಿತ್ತು. ಈ ಮೊದಲ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಿತ್ತು.

ಮೊದಲ ಡಿಆರ್‌ಎಸ್: ಐಪಿಎಲ್‌ನಲ್ಲಿ ಮೊದಲ ಬಾರಿಗೆ ಡಿಆರ್‌ಎಸ್ ಅನ್ನು 2018 ರ ಆವೃತ್ತಿಯಲ್ಲಿ ಬಳಸಲಾಯಿತು. ಅಂದು ಮುಂಬೈ ಪರ ಆಡುತ್ತಿದ್ದ ಎವಿನ್ ಲೆವಿಸ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ನೀಡಲಾಗಿತ್ತು. ಆ ವೇಳೆ ಲೆವಿಸ್, ಡಿಆರ್‌ಎಸ್ ತೆಗೆದುಕೊಂಡಿದ್ದರು. ಆದರೆ ಡಿಆರ್ಎಸ್ನಲ್ಲೂ ಲೆವಿಸ್ ಔಟೆಂದು ತೀರ್ಪು ನೀಡಲಾಯಿತು.

ಮೊದಲ ಇಂಪ್ಯಾಕ್ಟ್ ಪ್ಲೇಯರ್: 2023 ರ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ತಂಡ ಮೊದಲ ಬಾರಿಗೆ ಈ ನಿಯಮವನ್ನು ಬಳಸಿಕೊಂಡಿತ್ತು. ಅದರಂತೆ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವೇಗಿ ತುಷಾರ್ ದೇಶಪಾಂಡೆ 3.2 ಓವರ್ ಬೌಲ್ ಮಾಡಿ 51 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.
Published On - 5:39 pm, Thu, 21 March 24









