
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ ಎಲಿಮಿನೇಟರ್ ಪಂದ್ಯವಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಅಹಮದಾಬಾದ್ಗೆ ಬಂದಿಳಿದಿದೆ. ಮೇ 22 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕಾಗಿ ಅಹಮದಾಬಾದ್ಗೆ ಬಂದಿಳಿದ ಆರ್‌ಸಿಬಿ ಆಟಗಾರರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಆಟಗಾರರು ಹೋಟೆಲ್ಗೆ ಬರುತ್ತಿದ್ದಂತೆ ಸಾಂಪ್ರದಾಯಿಕ ರೀತಿಯಲ್ಲಿ ತಿಲಕವಿಟ್ಟು, ಪಟ್ಟಾ ನೀಡಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕೋರಲಾಯಿತು.

ಇದೀಗ ಆರ್‌ಸಿಬಿ ಆಟಗಾರರನ್ನು ಸ್ವಾಗತಿಸಿದ ಪರಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಫೋಟೋದಲ್ಲಿ ವಿರಾಟ್ ಕೊಹ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಸ್ಪಿನ್ನರ್ ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ದಿನೇಶ್ ಕಾರ್ತಿಕ್ ಸೇರಿದಂತೆ ಕೆಲ ಆಟಗಾರರ ಚಿತ್ರಗಳನ್ನು ಆರ್‌ಸಿಬಿ ತನ್ನ ಸಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್‌ಸಿಬಿ 15 ಬಾರಿ ಜಯ ಸಾಧಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಮೂರು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು. ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲವನ್ನು ಹೊಂದಿದ್ದರೂ, ಗೆಲ್ಲುವ ಫೇವರೇಟ್ ಆಗಿ ಆರ್‌ಸಿಬಿ ಗುರುತಿಸಿಕೊಂಡಿದೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದು 2ನೇ ಕ್ವಾಲಿಫೈಯರ್ ಹಂತಕ್ಕೇರುವ ವಿಶ್ವಾಸದಲ್ಲಿದೆ ಫಾಫ್ ಪಡೆ.