IPL 2024: ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದ ಎಡಗೈ ವೇಗಿ ಟ್ರೆಂಟ್ ಬೌಲ್ಟ್
TV9 Web | Updated By: ಝಾಹಿರ್ ಯೂಸುಫ್
Updated on:
Mar 25, 2024 | 7:30 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 4ನೇ ಪಂದ್ಯದ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಭಾರತೀಯ ಎಡಗೈ ವೇಗಿಗಳ ಸಾಧನೆಯನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಎಡಗೈ ವೇಗದ ಬೌಲರ್ ಎಂಬ ದಾಖಲೆ ಇದೀಗ ನ್ಯೂಝಿಲೆಂಡ್ ವೇಗಿಯ ಪಾಲಾಗಿದೆ.
1 / 7
ಜೈಪುರ್ನ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ಮೂಲಕ ಎಡಗೈ ವೇಗಿ ಟ್ರೆಂಟ್ ಬೌಲ್ಟ್ (Trent Boult) ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅವರ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್ (82) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಟ್ರೆಂಟ್ ಬೌಲ್ಟ್ ಮೊದಲ ಓವರ್ನಲ್ಲೇ ಆಘಾತ ನೀಡಿದರು.
3 / 7
ಮೊದಲ ಓವರ್ನ ಐದನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (4) ವಿಕೆಟ್ ಪಡೆದ ಬೌಲ್ಟ್, ಬಳಿಕ 3ನೇ ಓವರ್ನ 2ನೇ ಎಸೆತದಲ್ಲಿ ದೇವದತ್ ಪಡಿಕ್ಕಲ್ (0) ಕ್ಲೀನ್ ಬೌಲ್ಡ್ ಮಾಡಿದರು. ಈ ಎರಡು ವಿಕೆಟ್ಗಳೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಎಡಗೈ ವೇಗಿ ಎಂಬ ದಾಖಲೆಯನ್ನು ಟ್ರೆಂಟ್ ಬೌಲ್ಟ್ ತಮ್ಮದಾಗಿಸಿಕೊಂಡರು.
4 / 7
ಈ ಹಿಂದೆ ಈ ದಾಖಲೆ ಎಡಗೈ ವೇಗ ಬೌಲರ್ ಆಶಿಶ್ ನೆಹ್ರಾ ಅವರ ಹೆಸರಿನಲ್ಲಿತ್ತು. ಪುಣೆ ವಾರಿಯರ್ಸ್, ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪರ ಒಟ್ಟು 88 ಐಪಿಎಲ್ ಪಂದ್ಯಗಳನ್ನಾಡಿರುವ ನೆಹ್ರಾ 106 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು.
5 / 7
ಇದೀಗ ಐಪಿಎಲ್ನಲ್ಲಿ 89 ಪಂದ್ಯಗಳನ್ನಾಡಿರುವ ಟ್ರೆಂಟ್ ಬೌಲ್ಟ್ ಒಟ್ಟು 107 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಕಬಳಿಸಿದ ಎಡಗೈ ವೇಗದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
6 / 7
ಅಷ್ಟೇ ಅಲ್ಲದೆ ಐಪಿಎಲ್ ಪಂದ್ಯದ ಮೊದಲ ಓವರ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್ ಎಂಬ ಹಿರಿಮೆಗೂ ಬೌಲ್ಟ್ ಪಾತ್ರರಾಗಿದ್ದಾರೆ. ಇದುವರೆಗೆ 55 ಬಾರಿ ಮೊದಲ ಓವರ್ ಎಸೆದಿರುವ ಬೌಲ್ಟ್ 23 ಬಾರಿ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪ್ರಥಮ ಓವರ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿದೇಶಿ ಬೌಲರ್ ಎಂಬ ದಾಖಲೆಯನ್ನು ಟ್ರೆಂಟ್ ಬೌಲ್ಟ್ ತಮ್ಮದಾಗಿಸಿಕೊಂಡಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ 194 ರನ್ಗಳ ಗುರಿಯನ್ನು ಬೆನ್ನತ್ತಿದ ಕೆಎಲ್ ರಾಹುಲ್ ಮುಂದಾಳತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಂಜು ಸ್ಯಾಮ್ಸನ್ ಪಡೆ ಮೊದಲ ಪಂದ್ಯದಲ್ಲಿ 20 ರನ್ಗಳ ಭರ್ಜರಿ ಜಯ ಸಾಧಿಸಿದೆ.