
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಸಿಎಸ್ಕೆ ವಿರುದ್ದದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಆರ್ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಇದಾದ ಬಳಿಕ ಕೆಕೆಆರ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಗ್ಗರಿಸಿದೆ.

ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರು ಮೈದಾನದಲ್ಲಿ ಮುಗ್ಗರಿಸುವ ಮೂಲಕ ಆರ್ಸಿಬಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದರ ನಡುವೆ ಆರ್ಸಿಬಿ ತಂಡದ ಸ್ಟ್ರಾಟಜಿ ಬಗ್ಗೆ ಕೂಡ ಭಾರೀ ಟೀಕೆಗಳು ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಕನ್ನಡಿಗ ವಿಜಯಕುಮಾರ್ ವೈಶಾಕ್ ಅವರನ್ನು ಕೈಬಿಟ್ಟಿರುವುದು.

ಬೆಂಗಳೂರಿನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿಜಯಕುಮಾರ್ ವೈಶಾಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ದುಬಾರಿಯಾಗಿದ್ದರೂ, ಒಂದೆಡೆ ವೈಶಾಕ್ ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಅಲ್ಲದೆ 4 ಓವರ್ಗಳಲ್ಲಿ ಕೇವಲ 23 ರನ್ ನೀಡಿ 1 ವಿಕೆಟ್ ಕಬಳಿಸಿ ಮಿಂಚಿದ್ದರು.

ಇಂತಹ ಅತ್ಯುತ್ತಮ ಪ್ರದರ್ಶನ ನೀಡಿದರೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿಜಯಕುಮಾರ್ ವೈಶಾಕ್ ಅವರನ್ನು ಆರ್ಸಿಬಿ ಕಣಕ್ಕಿಳಿಸಿರಲಿಲ್ಲ. ಮತ್ತೊಮ್ಮೆ ಅದೇ ಮಯಾಂಕ್ ಡಾಗರ್ ಅವರಿಗೆ ಚಾನ್ಸ್ ನೀಡಿದ್ದರು.

ಇದೀಗ ತವರು ಮೈದಾನದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರೂ ವಿಜಯಕುಮಾರ್ ವೈಶಾಕ್ ಅವರನ್ನು ಕೈ ಬಿಡಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ ಮಾಜಿ ಆಟಗಾರ ರಾಬಿನ್ ಉತ್ತಪ್ಪ. ಕಳೆದ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿದ ವೈಶಾಕ್ಗೆ ಅವಕಾಶ ನೀಡದಿರುವ ಆರ್ಸಿಬಿ ಮ್ಯಾನೇಜ್ಮೆಂಟ್ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದ ಕೆಕೆಆರ್ ವಿರುದ್ಧವೇ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಕನ್ನಡಿಗನನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಕೈ ಬಿಟ್ಟು ಇದೀಗ ಆರ್ಸಿಬಿ ತಂಡವು ಪರಿತಪಿಸುವಂತಾಗಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಸೋಲಿನೊಂದಿಗೆ ಎಂಬುದು ವಿಶೇಷ.