- Kannada News Photo gallery Cricket photos IPL 2024: Why Mumbai Indians replaced Rohit Sharma with Hardik Pandya
IPL 2024: ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇಕೆ? ಅಸಲಿ ಕಾರಣ ಬಹಿರಂಗ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ (IPL) ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಹಾಗೆಯೇ ಕಳೆದ 10 ವರ್ಷಗಳಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ ಈ ಬಾರಿ ಕೇವಲ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.
Updated on: Feb 06, 2024 | 9:30 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯರನ್ನು (Hardik Pandya) ಹೊಸ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಫ್ರಾಂಚೈಸಿ ವಿರುದ್ಧ ಹಿಟ್ಮ್ಯಾನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

ಇದಾಗ್ಯೂ ಈ ಬದಲಾವಣೆ ಬಗ್ಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಯಾವುದೇ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ. ಅಲ್ಲದೆ ತಂಡದ ಸಿಬ್ಬಂದಿಗಳಾಗಿ ಅಥವಾ ಹಿರಿಯ ಆಟಗಾರರಾಗಲಿ ಈ ಬಗ್ಗೆ ತುಟಿ ಪಿಟಿಕ್ ಅಂದಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಈ ವಿಚಾರವಾಗಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಮಾತನಾಡಿದ್ದಾರೆ. ತಂಡ ನಾಯಕತ್ವದ ಬದಲಾವಣೆಗೆ ಅಸಲಿ ಕಾರಣವೇನು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಮಾರ್ಕ್ ಬೌಚರ್, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಎಂಬುದು ಸಂಪೂರ್ಣವಾಗಿಯೂ ಕ್ರಿಕೆಟ್ ನಿರ್ಧಾರ. ಅಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಆದರೆ ಇದು ಭಾರತದ ಬಹಳಷ್ಟು ಮಂದಿಗೆ ಅರ್ಥವಾಗುವುದಿಲ್ಲ. ಅವರು ತುಂಬಾ ಭಾವನಾತ್ಮಕವಾಗುತ್ತಾರೆ. ಈ ಭಾವನೆಗಳನ್ನು ದೂರವಿಡಿ. ಇದು ಕೇವಲ ಕ್ರಿಕೆಟ್ಗಾಗಿ ತೆಗೆದುಕೊಂಡ ನಿರ್ಧಾರ ಎಂದು ಮುಂಬೈ ಇಂಡಿಯನ್ಸ್ ಕೋಚ್ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಯಾಗಿ ಮತ್ತು ಆಟಗಾರನಾಗಿ ರೋಹಿತ್ ಅತ್ಯುತ್ತಮವಾದದನ್ನು ಹೊರತರಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲ ಸೀಸನ್ಗಳಲ್ಲಿ ಅವರು ಚೆನ್ನಾಗಿ ಆಡಿಲ್ಲ ಎಂಬುದು ಗೊತ್ತಿದೆ. ಆದರೆ ಈ ಬಾರಿ ಅವರ ಮೇಲೆ ನಾಯಕತ್ವದ ಹೊರೆಯಿಲ್ಲ. ಹೀಗಾಗಿ ಬ್ಯಾಟಿಂಗ್ಗೆ ಹೋದಾಗ ಯಾವುದೇ ಒತ್ತಡ ಇರುವುದಿಲ್ಲ. ಬ್ಯಾಟಿಂಗ್ ಅನ್ನು ಆನಂದಿಸಿ ಅತ್ಯುತ್ತಮ ರನ್ಗಳನ್ನು ಕಲೆಹಾಕಲು ಅವಕಾಶವಿದೆ. ಹೀಗಾಗಿ ಹಿಟ್ಮ್ಯಾನ್ ಕಡೆಯಿಂದ ಈ ಬಾರಿ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಇದೇ ವೇಳೆ ಮಾರ್ಕ್ ಬೌಚರ್ ತಿಳಿಸಿದ್ದಾರೆ.

ಇಲ್ಲಿ ನೀವು ಗಮನಿಸಬೇಕಾದ ವಿಷಯ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಹುಡುಗ. ಈ ತಂಡದಿಂದ ಹೋಗಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು. ನಾಯಕನಾಗಿ ಮೊದಲ ಸೀಸನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇನ್ನು 2023 ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಹೀಗಾಗಿ ಪಾಂಡ್ಯರನ್ನು ಕರೆತರಲು ನಾವು ಕೂಡ ವಿಂಡೋವನ್ನು ಎದುರು ನೋಡುತ್ತಿದ್ದೆವು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದೇವೆ ಎಂದು ಬೌಚರ್ ತಿಳಿಸಿದ್ದಾರೆ.

ಪಾಂಡ್ಯಗೆ ಕ್ಯಾಪ್ಟನ್ಸಿ ನೀಡಿರುವ ಬಗ್ಗೆ ಮಾತನಾಡಿದ ಬೌಚರ್, ಗುಜರಾತ್ ಟೈಟಾನ್ಸ್ ತಂಡವು ಪಾಂಡ್ಯ ನಾಯಕತ್ವದಲ್ಲಿ 2022 ರಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು. 2023 ರಲ್ಲಿ ಫೈನಲ್ ಆಡಿದೆ. ಅಂದರೆ ನಿಸ್ಸಂಶಯವಾಗಿ ಆತನಲ್ಲಿ ಕೆಲವು ಉತ್ತಮ ನಾಯಕತ್ವದ ಕೌಶಲ್ಯಗಳಿವೆ. ಹೀಗಾಗಿ ರೋಹಿತ್ ಶರ್ಮಾ ಬದಲಿಗೆ ನಮ್ಮ ಮುಂದಿದ್ದ ಅತ್ಯುತ್ತಮ ಆಯ್ಕೆ ಹಾರ್ದಿಕ್ ಪಾಂಡ್ಯ. ಹೀಗಾಗಿ ಭವಿಷ್ಯದ ದೃಷ್ಟಿಯಲ್ಲಿ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ ಎಂದು ಮಾರ್ಕ್ ಬೌಚರ್ ತಿಳಿಸಿದ್ದಾರೆ.

ಅಂದಹಾಗೆ 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ 5 ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ದಶಕದ ಬಳಿಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಕೇವಲ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್ , ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಝಿ , ದಿಲ್ಶನ್ ಮಧುಶಂಕ , ಶ್ರೇಯಸ್ ಗೋಪಾಲ್ , ನುವಾನ್ ತುಷಾರ , ನಮನ್ ಧೀರ್ , ಅನ್ಶುಲ್ ಕಾಂಬೋಜ್ , ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.




