IPL 2024: ಖದರ್ ಕಳೆದುಕೊಂಡ ಯಶಸ್ವಿ ಜೈಸ್ವಾಲ್..!
TV9 Web | Updated By: ಝಾಹಿರ್ ಯೂಸುಫ್
Updated on:
Apr 13, 2024 | 2:24 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಯಶಸ್ವಿ ಜೈಸ್ವಾಲ್ ಕಳಪೆ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ರನ್ ಬಾರಿಸಿ ಔಟಾಗಿದ್ದ ಜೈಸ್ವಾಲ್, ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ರನ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ತಲಾ 24 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಇನ್ನು ಆರ್ಸಿಬಿ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು.
1 / 6
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್... ಬಲಿಷ್ಠ ಇಂಗ್ಲೆಂಡ್ ಪಡೆಗೆ ಜೈಸ್ಬಾಲ್ ತೋರಿಸಿದ ಯುವ ದಾಂಡಿಗ... ಪ್ರಸ್ತುತ ಕ್ರಿಕೆಟ್ ಅಂಗಳದ ಆಕ್ರಮಣಕಾರಿ ಎಡಗೈ ಬ್ಯಾಟ್ಸ್ಮನ್... ಹೀಗೆ ಕಳೆದೊಂದು ವರ್ಷದಿಂದ ಸಂಚಲನ ಸೃಷ್ಟಿಸಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) ಈ ಬಾರಿಯ ಐಪಿಎಲ್ನಲ್ಲಿ ಮಂಕಾಗಿದ್ದಾರೆ.
2 / 6
ಕಳೆದ ಸೀಸನ್ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 5 ಅರ್ಧಶತಕ ಹಾಗೂ 1 ಶತಕದೊಂದಿಗೆ ಕಲೆಹಾಕಿದ್ದು ಬರೋಬ್ಬರಿ 625 ರನ್ಗಳು. ಆದರೆ ಈ ಬಾರಿ ಜೈಸ್ವಾಲ್ಗೆ 50 ಎಸೆತಗಳನ್ನು ಎದುರಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.
3 / 6
ಐಪಿಎಲ್ 2024 ರ ಮೊದಲಾರ್ಧದ 5 ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಎದುರಿಸಿರುವುದು ಕೇವಲ 46 ಎಸೆತಗಳನ್ನು ಮಾತ್ರ. ಈ ವೇಳೆ ಕೇವಲ 63 ರನ್ ಕಲೆಹಾಕಿದ್ದಾರೆ. ಅಲ್ಲದೆ ಪ್ರತಿ ಬಾರಿಯೂ ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿದ್ದಾರೆ.
4 / 6
ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಜೈಸ್ವಾಲ್ ಇದುವರೆಗೆ 12.60 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಹಾಗೆಯೇ ಅವರ ಸ್ಟ್ರೈಕ್ ರೇಟ್ 136.96 ಕ್ಕೆ ಕುಸಿದಿದೆ. ಕಳೆದ ಸೀಸನ್ನಲ್ಲಿ ಜೈಸ್ವಾಲ್ 163.61 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
5 / 6
ಇದೀಗ ಫಾರ್ಮ್ ಕಳೆದುಕೊಂಡಿರುವ ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾಗುತ್ತಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ಕಳಪೆ ಪ್ರದರ್ಶನ ನೀಡುತ್ತಿರುವ ಜೈಸ್ವಾಲ್ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.
6 / 6
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯಶಸ್ವಿ ಜೈಸ್ವಾಲ್ ಮುಂದೆ 9 ಪಂದ್ಯಗಳಿವೆ. ಈ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ನೊಂದಿಗೆ ತಮ್ಮ ಫಾರ್ಮ್ ಅನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರೆ ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲದಿದ್ದರೆ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಅಥವಾ ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.