- Kannada News Photo gallery Cricket photos IPL 2024 Rohit Sharma creates 2 unique records his 250th ipl match
IPL 2024: ಐತಿಹಾಸಿಕ ಪಂದ್ಯದಲ್ಲಿ ಎರಡೆರಡು ದಾಖಲೆ ಬರೆದ ರೋಹಿತ್ ಶರ್ಮಾ..!
IPL 2024: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲೇ ಎರಡೆರಡು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
Updated on: Apr 18, 2024 | 10:11 PM

ಪಂಜಾಬ್ನ ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯ ರೋಹಿತ್ ಶರ್ಮಾಗೆ ಐಪಿಎಲ್‌ನಲ್ಲಿ 250ನೇ ಪಂದ್ಯವಾಗಿದೆ. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ 250 ಪಂದ್ಯಗಳನ್ನಾಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ಗಿಂತ ಮೊದಲ ಎಂಎಸ್ ಧೋನಿ ಈ ಮೈಲಿಗಲ್ಲು ಸ್ಥಾಪಿಸಿದ್ದರು.

ಇನ್ನು ಈ ಐತಿಹಾಸಿಕ ಪಂದ್ಯದಲ್ಲಿ 25 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 36 ರನ್ ಬಾರಿಸಿದರು. ಈ ವೇಳೆ 3 ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನಿರ್ಮಿಸಿದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಇದುವರೆಗೆ 224 ಸಿಕ್ಸರ್ ಸಿಡಿಸಿದ್ದಾರೆ. ಈ ಮೊದಲು ಈ ದಾಖಲೆ ಕೀರಾನ್ ಪೊಲಾರ್ಡ್ ಹೆಸರಿನಲ್ಲಿತ್ತು. ಮುಂಬೈ ತಂಡದ ಪರ ಕೀರಾನ್ ಪೊಲಾರ್ಡ್ ಐಪಿಎಲ್‌ನಲ್ಲಿ 223 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇದಲ್ಲದೆ ಈ ಪಂದ್ಯದಲ್ಲಿ 36 ರನ್ಗಳ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 6500 ರನ್ ಪೂರೈಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 6500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

ರೋಹಿತ್ಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಮಾತ್ರ ಐಪಿಎಲ್‌ನಲ್ಲಿ 6500 ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದರು. ಪ್ರಸ್ತುತ ಐಪಿಎಲ್‌ನಲ್ಲಿ ಅಧಿಕ ರನ್ ಬಾರಿಸಿರುವವರ ಪಟ್ಟಿಯಲ್ಲಿ 7624 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.




