IPL 2024: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ SRH-MI
TV9 Web | Updated By: ಝಾಹಿರ್ ಯೂಸುಫ್
Updated on:
Mar 28, 2024 | 6:25 AM
IPL 2024: ಐಪಿಎಲ್ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಬಾರಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆರ್ಸಿಬಿ ಹೆಸರಿನಲ್ಲಿತ್ತು. 2013 ರಲ್ಲಿ ಆರ್ಸಿಬಿ ಪುಣೆ ವಾರಿಯರ್ಸ್ ವಿರುದ್ಧ 263 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಎಸ್ಆರ್ಹೆಚ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
1 / 9
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 8ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ (MI) ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.
2 / 9
ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳು ಮುಂಬೈ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದರು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 62 ರನ್ ಚಚ್ಚಿದರೆ, ಆ ಬಳಿಕ ಬಂದ ಅಭಿಷೇಕ್ ಶರ್ಮಾ ಕೇವಲ 23 ಎಸೆತಗಳಲ್ಲಿ 63 ರನ್ ಸಿಡಿಸಿದರು.
3 / 9
ಇನ್ನು ಐಡೆನ್ ಮಾರ್ಕ್ರಾಮ್ 28 ಎಸೆತಗಳಲ್ಲಿ 42 ರನ್ ಬಾರಿಸಿದರೆ, ಹೆನ್ರಿಕ್ ಕ್ಲಾಸೆನ್ ಕೇವಲ 34 ಎಸೆತಗಳಲ್ಲಿ ಅಜೇಯ 80 ರನ್ ಚಚ್ಚಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ದಾಖಲೆಯ 277 ರನ್ ಕಲೆಹಾಕಿತು.
4 / 9
278 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಶಾನ್ ಕಿಶನ್ (34) ಹಾಗೂ ರೋಹಿತ್ ಶರ್ಮಾ (26) ಸ್ಪೋಟಕ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ನಮನ್ ಧಿರ್ 30 ರನ್ ಬಾರಿಸಿದರೆ, ತಿಲಕ್ ವರ್ಮಾ 34 ಎಸೆತಗಳಲ್ಲಿ 64 ರನ್ ಸಿಡಿಸಿದರು.
5 / 9
ಇನ್ನು ಹಾರ್ದಿಕ್ ಪಾಂಡ್ಯ 24 ರನ್ಗಳ ಕೊಡುಗೆ ನೀಡಿದರೆ, ಟಿಮ್ ಡೇವಿಡ್ ಅಜೇಯ 42 ರನ್ ಬಾರಿಸಿದರು. ಈ ಮೂಲಕ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಬಾರಿಸಿ, 31 ರನ್ಗಳ ಅಂತರದಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
6 / 9
ಈ ಸೋಲಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ಜೊತೆಗೂಡಿ ಈ ಪಂದ್ಯದ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಒಟ್ಟು 523 ರನ್ಗಳನ್ನು ಕಲೆಹಾಕಿ ಎಂಬುದು ವಿಶೇಷ.
7 / 9
ಅಂದರೆ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 277 ರನ್ ಬಾರಿಸಿದರೆ, ಮುಂಬೈ ಇಂಡಿಯನ್ಸ್ 246 ರನ್ ಕಲೆಹಾಕಿತು. ಇದರೊಂದಿಗೆ ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ ಮೂಡಿಬಂದ ಗರಿಷ್ಠ ಒಟ್ಟು ಮೊತ್ತದ ದಾಖಲೆ ಸನ್ರೈಸರ್ಸ್ ಹೈದರಾಬಾದ್-ಮುಂಬೈ ಇಂಡಿಯನ್ಸ್ ಪಾಲಾಯಿತು.
8 / 9
ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್-ಸೌತ್ ಆಫ್ರಿಕಾ ತಂಡಗಳ ಹೆಸರಿನಲ್ಲಿತ್ತು. 2023 ರಲ್ಲಿ ಸೆಂಚುರಿಯನ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 258 ರನ್ ಬಾರಿಸಿದರೆ, ಸೌತ್ ಆಫ್ರಿಕಾ 259 ರನ್ಗಳಿಸಿ ಈ ಪಂದ್ಯವನ್ನು ಗೆದ್ದುಕೊಂಡಿತು. ಹೀಗೆ ಈ ಪಂದ್ಯದಲ್ಲಿ ಒಟ್ಟು 517 ರನ್ಗಳ ದಾಖಲೆಯ ಮೊತ್ತ ಮೂಡಿಬಂದಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿತ್ತು.
9 / 9
ಇದೀಗ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಜೊತೆಗೂಡಿ ಹೈದರಾಬಾದ್ನಲ್ಲಿ ರನ್ ಮಳೆಯನ್ನೇ ಹರಿಸಿದೆ. ಈ ಮೂಲಕ ಒಟ್ಟು 523 ರನ್ ಕಲೆಹಾಕಿ, ಉಭಯ ತಂಡಗಳು ಜೊತೆಗೂಡಿ ಟಿ20 ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.