- Kannada News Photo gallery Cricket photos IPL 2024 Virat Kohli becomes 1st Indian to cross 12000 T20 runs
IPL 2024: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ..!
IPL 2024, Virat Kohli: ಐಪಿಎಲ್ ಮೂಲಕ ಬರೋಬ್ಬರಿ 2 ತಿಂಗಳ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕಕ್ಕೆ ಮರಳಿದ್ದಾರೆ. ಅಲ್ಲದೆ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on:Mar 22, 2024 | 9:26 PM

ಐಪಿಎಲ್ ಮೂಲಕ ಬರೋಬ್ಬರಿ 2 ತಿಂಗಳ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕಕ್ಕೆ ಮರಳಿದ್ದಾರೆ. ಅಲ್ಲದೆ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ 6 ರನ್ ಕಲೆಹಾಕಿದ ಕೂಡಲೇ ಚುಟುಕು ಮಾದರಿಯಲ್ಲಿ ಅಂದರೆ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.

360ನೇ ಟಿ20 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಕೊಹ್ಲಿ, ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ವಿರಾಟ್‌ಗಿಂತ ಮೊದಲು ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೀರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ. ಆದರೆ ಅತಿ ವೇಗವಾಗಿ 12000 ರನ್ ಪೂರೈಸಿದ ವಿಚಾರದಲ್ಲಿ ವಿರಾಟ್ ಇದೀಗ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.

ಮೊದಲ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ 343 ಇನ್ನಿಂಗ್ಸ್ಗಳಲ್ಲಿ 12 ಸಾವಿರ ರನ್ ಪೂರೈಸಿದ್ದರು. ಸದ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೇಲ್ ಇದುವರೆಗೆ ಚುಟುಕು ಮಾದರಿಯಲ್ಲಿ 14562 ರನ್ ಕಲೆಹಾಕಿದ್ದಾರೆ.

ಇದಲ್ಲದೆ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ಸಾವಿರ ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಸಿಎಸ್ಕೆ ವಿರುದ್ಧ ಸಾವಿರ ರನ್ಗಳ ಗಡಿ ದಾಟಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೊಹ್ಲಿಗಿಂತ ಮೊದಲು ಪಂಜಾಬ್ ನಾಯಕ ಶಿಖರ್ ಧವನ್ ಈ ಸಾಧನೆ ಮಾಡಿದ್ದರು.

ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ಸಾವಿರ ರನ್ ಪೂರೈಸಿರುವ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಈ ಲೀಗ್‌ನಲ್ಲಿ ಎರಡು ತಂಡಗಳ ವಿರುದ್ಧ 1000+ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
Published On - 9:26 pm, Fri, 22 March 24



















