ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಅದು ಸಹ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ 84 ಪಂದ್ಯಗಳನ್ನು ಆಡಿಸಲು ಚಿಂತಿಸಲಾಗಿದೆ. ಈವರಗೆ ಐಪಿಎಲ್ನಲ್ಲಿ ಪ್ಲೇಆಫ್ ಸೇರಿ ಒಟ್ಟು 74 ಪಂದ್ಯಗಳನ್ನಾಡಲಾಗುತ್ತಿತ್ತು.
ಆದರೆ ಮುಂಬರುವ ಸೀಸನ್ಗಳಲ್ಲಿ ಹೆಚ್ಚುವರಿ 10 ಪಂದ್ಯಗಳು ನಡೆಸುವ ಬಗ್ಗೆ ಬಿಸಿಸಿಐ ಚರ್ಚಿಸಿದೆ. ಈ ಮೂಲಕ ಒಟ್ಟು 84 ಪಂದ್ಯಗಳ ಟೂರ್ನಿಯನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಅದರಂತೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಗೆಯೇ ಐಪಿಎಲ್ 2027 ರಲ್ಲಿ ಈ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಿದ್ದಾರೆ. ಇದರಿಂದ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ಪ್ರಸ್ತುತ ಐಪಿಎಲ್ ಅನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.
ಐಪಿಎಲ್ 2021 ರಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. ಇದರಲ್ಲಿ 56 ಲೀಗ್ ಪಂದ್ಯಗಳಿದ್ದರೆ, 4 ಪ್ಲೇಆಫ್ ಪಂದ್ಯಗಳನ್ನು ಆಡಿಸಲಾಗಿತ್ತು. ಈ ವೇಳೆ ಪ್ರತಿ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನಾಡಿತ್ತು. ಈ ಮೂಲಕ ಲೀಗ್ನಲ್ಲಿ ಎಲ್ಲಾ ತಂಡಗಳು ಪರಸ್ಪರ 2 ಪಂದ್ಯಗಳಂತೆ ಒಟ್ಟು 14 ಪಂದ್ಯಗಳನ್ನಾಡಿದ್ದರು. ಆದರೆ 2022ರಿಂದ ಐಪಿಎಲ್ ಅನ್ನು ರೌಂಡ್ ರಾಬಿನ್ ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ. ಈ ಸ್ವರೂಪವನ್ನೇ ಐಪಿಎಲ್ 2025 ಮತ್ತು 2026 ರಲ್ಲೂ ಮುಂದುವರೆಸಲಾಗುತ್ತದೆ.
ಇನ್ನು ಐಪಿಎಲ್ 2027 ರ ಸೀಸನ್ ಅನ್ನು ಲೀಗ್ ಮಾದರಿಯಲ್ಲೇ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅಂದರೆ ಎಲ್ಲಾ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಲಿದೆ. ಇಲ್ಲಿ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ.
ಸದ್ಯ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚರ್ಚಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಇದಾಗ್ಯೂ ಮುಂಬರುವ ಸೀಸನ್ಗಳಲ್ಲಿ ಪ್ಲೇಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ಈಗಿರುವಂತೆ ಮೊದಲ ಕ್ವಾಲಿಫೈಯರ್ ಪಂದ್ಯ, ಎಲಿಮಿನೇಟರ್ ಪಂದ್ಯ, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ನಡೆಸಲಾಗುತ್ತದೆ.
Published On - 8:53 am, Tue, 28 May 24