- Kannada News Photo gallery Cricket photos IPL 2025: Abhishek Sharma's Blitz Leads SRH Chase Against PBKS
IPL 2025: 14 ಬೌಂಡರಿ, 10 ಸಿಕ್ಸರ್, 141 ರನ್..! ಸಿಡಿಲಬ್ಬರದ ಶತಕ ಸಿಡಿಸಿದ ಅಭಿಷೇಕ್
Abhishek Sharma's Fastest IPL Century: ಐಪಿಎಲ್ 2025 ರ 27ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಕೇವಲ 4೦ ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದು ಐಪಿಎಲ್ ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತಿ ವೇಗದ ಶತಕವಾಗಿದೆ. ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಅವರ 171 ರನ್‌ಗಳ ಜೊತೆಯಾಟವು ಈ ಸೀಸನ್‌ನ ಅತಿ ದೊಡ್ಡ ಜೊತೆಯಾಟವಾಗಿದೆ.
Updated on:Apr 12, 2025 | 11:15 PM

ಐಪಿಎಲ್ 2025 ರ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಿಯಾಗಿವೆ. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು.

ಪಂಜಾಬ್ ನೀಡಿರುವ 246 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಹೈದರಾಬಾದ್ ತಂಡದ ಪರ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿ ಮೈದಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಆರಂಭದಿಂದಲೂ ಪಂಜಾಬ್ ಬೌಲರ್ಗಳ ಹೆಡೆಮುರಿ ಕಟ್ಟಿದ ಅಭಿಷೇಕ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ಕೇವಲ 40 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಅಭಿಷೇಕ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. 250ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಅಬ್ಬರದ ಮುಂದೆ ಪಂಜಾಬ್ ಬೌಲರ್‌ಗಳಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಇದು ಐಪಿಎಲ್‌ನಲ್ಲಿ ಭಾರತೀಯ ಬ್ಯಾಟರ್ ಒಬ್ಬ ದಾಖಲಿಸಿದ ಅತಿ ವೇಗದ ಮೂರನೇ ಶತಕ ಎಂಬ ದಾಖಲೆಯನ್ನು ಸೃಷ್ಟಿಸಿತು.

ಇದು ಮಾತ್ರವಲ್ಲದೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್ಗೆ ಬರೋಬ್ಬರಿ 171 ರನ್‌ಗಳ ಜೊತೆಯಾಟ ನೀಡಿದರು. ಕೇವಲ 74 ಎಸೆತಗಳಲ್ಲಿ 171 ರನ್ ಚಚ್ಚಿದ ಈ ಜೋಡಿ ಈ ಸೀಸನ್‌ನಲ್ಲಿ ಅತಿದೊಡ್ಡ ಜೊತೆಯಾಟವನ್ನಾಡಿದ ದಾಖಲೆಯನ್ನು ಸೃಷ್ಟಿಸಿತು. ಈ ಜೋಡಿ ಕೇವಲ 10 ಓವರ್ಗಳಲ್ಲಿ ಬರೋಬ್ಬರಿ 143 ರನ್ ಕಲೆಹಾಕಿತು.

ವಾಸ್ತವವಾಗಿ ಅಭಿಷೇಕ್ ಆರಂಭದಲ್ಲೇ ಕ್ಯಾಚ್ ನೀಡಿ ಔಟಾಗಿದ್ದರು. ವೇಗಿ ಯಶ್ ಠಾಕೂರ್ ಎಸೆದ ಓವರ್ನಲ್ಲಿ ಅಭಿಷೇಕ್ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಶಶಾಂಕ್ ಸಿಂಗ್ಗೆ ಕ್ಯಾಚ್ ನೀಡಿದ್ದರು. ಶಶಾಂಕ್ ಕೂಡ ಕ್ಯಾಚ್ ಹಿಡಿದಿದ್ದರು. ಆದರೆ ಯಶ್ ಠಾಕೂರ್ ಎಸೆದಿದ್ದ ಆ ಎಸೆತ ನೋ ಬಾಲ್ ಆಗಿತ್ತು. ಸಿಕ್ಕ ಜೀವದಾನದ ಲಾಭ ಪಡೆದ ಅಭಿಷೇಕ್ ಭರ್ಜರಿ ಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಅಂತಿಮವಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 55 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ ಬರೋಬ್ಬರಿ 14 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 141 ರನ್ ಕಲೆಹಾಕಿ 17ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಅಭಿಷೇಕ್ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳಿಂದಲೇ 116 ರನ್ ಕಲೆಹಾಕಿದರು.
Published On - 11:15 pm, Sat, 12 April 25



















