
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಸಿಎಸ್ಕೆ ತಂಡವು ಆ ಬಳಿಕ ಸತತ ಐದು ಮ್ಯಾಚ್ಗಳಲ್ಲೂ ಮುಗ್ಗರಿಸಿದೆ.

ಈ ಸೋಲುಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಐಪಿಎಲ್ನಲ್ಲಿ ಸತತ 5 ಮ್ಯಾಚ್ಗಳಲ್ಲಿ ಸೋತ ತಂಡಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಕಳೆದ 15 ವರ್ಷಗಳಲ್ಲಿ ಸಿಎಸ್ಕೆ ತಂಡವು ಒಮ್ಮೆಯೂ ಸತತ ಐದು ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿರಲಿಲ್ಲ. ಆದರೆ ಈ ಬಾರಿ ಚೆಪಾಕ್ ಮೈದಾನದಲ್ಲೇ ಯೆಲ್ಲೊ ಪಡೆಯ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಚೆಪಾಕ್ ಮೈದಾನದಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲನುಭವಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚೆಪಾಕ್ ಮೈದಾನದಲ್ಲೂ ಸತತ ಮೂರು ಸೋಲುಂಡಿದೆ. ಅಂದರೆ ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ತಂಡವು ಚೆಪಾಕ್ ಮೈದಾನದಲ್ಲಿ ಹ್ಯಾಟ್ರಿಕ್ ಸೋಲು ಕಂಡಿರಲಿಲ್ಲ.

ಆದರೆ ಈ ಬಾರಿ ಸಿಎಸ್ಕೆ ವಿರುದ್ಧ ಆರ್ಸಿಬಿ ಚೆಪಾಕ್ ಮೈದಾನದಲ್ಲಿ 17 ವರ್ಷಗಳ ಬಳಿಕ ಗೆಲುವು ದಾಖಲಿಸಿದೆ. ಇನ್ನು ಇದೇ ಮೈದಾನದಲ್ಲಿ 15 ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಯಶಸ್ವಿಯಾಗಿದೆ. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸಹ ಸಿಎಸ್ಕೆ ತವರಿನಲ್ಲಿ ಗೆಲುವಿನ ಪಾತಾಕೆಯನ್ನು ಹಾರಿಸಿದೆ.

ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 50 ರನ್ಗಳಿಂದ ಸೋಲನುಭವಿಸಿತ್ತು. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಸಿಎಸ್ಕೆ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಿಎಸ್ಕೆ ವಿರುದ್ಧ 25 ರನ್ಗಳಿಂದ ಜಯ ಸಾಧಿಸಿದರೆ, ಪಂಜಾಬ್ ಕಿಂಗ್ಸ್ 18 ರನ್ಗಳ ಗೆಲುವು ದಾಖಲಿಸಿದೆ. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಸಿಎಸ್ಕೆ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸತತ 5 ಸೋಲುಗಳ ರುಚಿ ನೋಡಿದಂತಾಗಿದೆ.