
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ (Josh Hazelwood) ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಭುಜದ ನೋವಿನ ಕಾರಣ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಹೇಝಲ್ವುಡ್ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರಲಿದ್ದಾರೆ.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಜೋಶ್ ಹೇಝಲ್ವುಡ್ ಭುಜದ ನೋವಿಗೆ ತುತ್ತಾಗಿದ್ದರು. ಹೀಗಾಗಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದಾದ ಬಳಿಕ ಐಪಿಎಲ್ ಸ್ಥಗಿತಗೊಂಡಿದ್ದರಿಂದ ಅವರು ಆಸ್ಟ್ರೇಲಿಯಾಗೆ ಮರಳಿದ್ದರು.

ಆದರೆ ಆ ಬಳಿಕ ಐಪಿಎಲ್ ಆರಂಭವಾದರೂ ಜೋಶ್ ಹೇಝಲ್ವುಡ್ ಬ್ರಿಸ್ಬೇನ್ನಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಅವರು ಐಪಿಎಲ್ಗಾಗಿ ಆಗಮಿಸಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಹೇಝಲ್ವುಡ್ ಲಭ್ಯರಿರಲಿದ್ದಾರೆ.

ಇತ್ತ ಪ್ಲೇಆಫ್ ಪಂದ್ಯಕ್ಕೂ ಮುನ್ನ ಜೋಶ್ ಹೇಝಲ್ವುಡ್ ಮರಳಿರುವುದು ಆರ್ಸಿಬಿ ತಂಡದ ಬಲ ಬೌಲಿಂಗ್ ಬಲ ಹೆಚ್ಚಿಸಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯಧಿಕ ವಿಕೆಟ್ ಪಡೆದಿರುವು ಬೌಲರ್ ಹೇಝಲ್ವುಡ್. 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಆಸೀಸ್ ವೇಗಿ ಒಟ್ಟು 18 ವಿಕೆಟ್ ಕಬಳಿಸಿದ್ದಾರೆ.

ಹಾಗೆಯೇ 10 ಪಂದ್ಯಗಳಲ್ಲಿ ಜೋಶ್ ಹೇಝಲ್ವುಡ್ ಬರೋಬ್ಬರಿ 103 ಡಾಟ್ ಬಾಲ್ ಮಾಡಿದ್ದರು. ಅಂದರೆ ಆರ್ಸಿಬಿ ಪರ ರನ್ ನಿಯಂತ್ರಿಸುವಲ್ಲಿ ಹಾಗೂ ವಿಕೆಟ್ ಕಬಳಿಸುವಲ್ಲಿ ಹೇಝಲ್ವುಡ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ನಿರ್ಣಾಯಕ ಪಂದ್ಯಗಳಿಗೂ ಮುನ್ನ ಅವರ ಆಗಮನದಿಂದಾಗಿ ಆರ್ಸಿಬಿ ತಂಡಕ್ಕೆ ಆನೆಬಲ ಬಂದಂತಾಗಿದೆ.