- Kannada News Photo gallery Cricket photos Punjab Kings likely to enter IPL 2025 Auction with Rs 112 crore
IPL 2025: 112 ಕೋಟಿ ರೂ.ನೊಂದಿಗೆ ಐಪಿಎಲ್ ಹರಾಜಿಗೆ ಪಂಜಾಬ್ ಕಿಂಗ್ಸ್
IPL 2025 Retention: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ. ಈ ಮೂಲಕ ಐಪಿಎಲ್ 2025 ಕ್ಕಾಗಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಹೀಗಾಗಿ ಐಪಿಎಲ್ ಸೀಸನ್-18 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ ಎನ್ನಬಹುದು.
Updated on: Oct 31, 2024 | 10:22 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗಾಗಿ ಮುನ್ನ ಪ್ರತಿ ಫ್ರಾಂಚೈಸಿಗಳು 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಆದರೆ ಈ ಆಯ್ಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪಂಜಾಬ್ ಕಿಂಗ್ಸ್ ಹಿಂದೇಟು ಹಾಕಿದೆ. ಅಲ್ಲದೆ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಅದು ಕೂಡ ಅನ್ಕ್ಯಾಪ್ಡ್ ಆಟಗಾರರನ್ನು ಎಂಬುದು ವಿಶೇಷ.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ, ಮುಂದಿನ ಸೀಸನ್ಗಾಗಿ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೆ ಕಳೆದ ಸೀಸನ್ನಲ್ಲಿ ತಂಡದಲ್ಲಿದ್ದ ಎಲ್ಲಾ ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಲು ಪಂಜಾಬ್ ಕಿಂಗ್ಸ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್ 2025 ಕ್ಕಾಗಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದ್ದಾರೆ. ಇನ್ನು ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿ ಪಂಜಾಬ್ ಕಿಂಗ್ಸ್ ಉಳಿಸಿಕೊಳ್ಳುವ ಆಟಗಾರರೆಂದರೆ...

ಶಶಾಂಕ್ ಸಿಂಗ್: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳನ್ನಾಡಿದ್ದ ಶಶಾಂಕ್ ಸಿಂಗ್ 2 ಸ್ಪೋಟಕ ಅರ್ಧಶತಕಗಳೊಂದಿಗೆ ಒಟ್ಟು 354 ರನ್ ಕಲೆಹಾಕಿದ್ದರು. ಅಲ್ಲದೆ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಶಶಾಂಕ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ.

ಪ್ರಭ್ಸಿಮ್ರಾನ್ ಸಿಂಗ್: ಪಂಜಾಬ್ ಕಿಂಗ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಪ್ರಭ್ಸಿಮ್ರಾನ್ ಸಿಂಗ್ ಕೂಡ ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಅದರಲ್ಲೂ ಕಳೆದ ಸೀಸನ್ನಲ್ಲಿ 14 ಪಂದ್ಯಗಳಿಂದ 2 ಅರ್ಧಶತಕಗಳೊಂದಿಗೆ 334 ರನ್ ಕಲೆಹಾಕಿದ್ದರು. ಹೀಗಾಗಿ ಪ್ರಭ್ಸಿಮ್ರಾನ್ ಅವರನ್ನು ಸಹ ತಂಡದಲ್ಲೇ ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಾಗಿದೆ.

ಇಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಶಶಾಂಕ್ ಸಿಂಗ್ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರು. ಹೀಗಾಗಿ ಇವರನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಬಹುದು. ಅದರಂತೆ ಇಬ್ಬರಿಗೆ ತಲಾ 4 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ.

ಇತ್ತ ಇಬ್ಬರಿಗೆ ನೀಡಲಾಗುವ 8 ಕೋಟಿ ರೂ. ಅನ್ನು ಒಟ್ಟು ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ 120 ಕೋಟಿ ರೂ. ನಿಂದ 8 ಕೋಟಿ ರೂ. ಕಡಿಮೆಯಾಗಲಿದ್ದು, ಇನ್ನುಳಿದ 112 ಕೋಟಿ ರೂ. ನೊಂದಿಗೆ ಪಂಜಾಬ್ ಕಿಂಗ್ಸ್ ಮೆಗಾ ಆಕ್ಷನ್ನಲ್ಲಿ ಕಾಣಿಸಿಕೊಳ್ಳಲಿದೆ.




