
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರನ ದಾಖಲೆ ರಿಷಭ್ ಪಂತ್ ಹೆಸರಿಗೆ ಸೇರ್ಪಡೆಯಾಗಿದೆ. ಐಪಿಎಲ್ ಸೀಸನ್-18ರ ಮೆಗಾ ಹರಾಜಿ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಪಂತ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಬರೋಬ್ಬರಿ 27 ಕೋಟಿ ರೂ. ನೀಡುವ ಮೂಲಕ ಎಂಬುದು ವಿಶೇಷ.

ಕುತೂಹಲಕಾರಿ ವಿಷಯ ಎಂದರೆ ರಿಷಭ್ ಪಂತ್ ಬಿಡ್ಡಿಂಗ್ ಮೂಲಕ ಪಡೆದ ಮೊತ್ತ 20.75 ಕೋಟಿ ರೂ. ಮಾತ್ರ. ಪಂತ್ ಖರೀದಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಆರಂಭದಿಂದಲೇ ಪೈಪೋಟಿ ಏರ್ಪಟ್ಟಿತ್ತು.

ಈ ಪೈಪೋಟಿಯೊಂದಿಗೆ ಪಂತ್ ಅವರ ಮೊತ್ತವು 20 ಕೋಟಿ ರೂ. ದಾಟಿದೆ. ಈ ವೇಳೆ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 20.75 ಕೋಟಿ ರೂ. ಹರಾಜು ಕೂಗಿದ್ದರು. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ RTM ಆಯ್ಕೆ ಬಳಸಿಕೊಂಡಿತು.

ಕಳೆದ ಸೀಸನ್ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಹೀಗಾಗಿ ಅವರ ಮೇಲೆ ಆರ್ಟಿಎಂ ಆಯ್ಕೆ ಬಳಸಿ ತಂಡದಲ್ಲೇ ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಅವಕಾಶವಿತ್ತು. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 20.75 ಕೋಟಿ ರೂ. ನಾವೇ ನೀಡುತ್ತೇವೆ ಎಂದು ಪಂತ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ.

ಆದರೆ ಐಪಿಎಲ್ ಮೆಗಾ ಹರಾಜಿನ ಹೊಸ ನಿಯಮದ ಪ್ರಕಾರ, ಆರ್ಟಿಎಂ ಬಳಕೆಯ ಬಳಿಕ ಕೊನೆಯ ಬಾರಿ ಬಿಡ್ ಮಾಡಿದ ಫ್ರಾಂಚೈಸಿಗೆ ಇನ್ನೊಮ್ಮೆ ಬಿಡ್ ಮಾಡಲು ಅವಕಾಶ ನೀಡಲಾಗುತ್ತದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ಗೆ ಅಂತಿಮ ಬಿಡ್ಗೆ ಅವಕಾಶ ನೀಡಲಾಗಿದೆ.

ಅದಾಗಲೇ ಆರ್ಟಿಎಂ ಮೂಲಕ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳಲು ಬಯಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ತಂತ್ರ ಅರಿತಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಏಕಾಏಕಿ 7 ಕೋಟಿ ರೂ. ಹೆಚ್ಚಿಸಿ ತಂತ್ರಕ್ಕೆ ಪ್ರತಿತಂತ್ರ ಹೆಣೆದರು.

ಅತ್ತ ಅಷ್ಟೊಂದು ದುಬಾರಿ ಮೊತ್ತ ನೀಡುವ ಪರಿಸ್ಥಿತಿಯಲ್ಲಿರದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಕೈ ಬಿಟ್ಟಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ದಾಖಲೆಯ ಮೊತ್ತಕ್ಕೆ ರಿಷಭ್ ಪಂತ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.