IPL 2025: ಕೆಎಲ್ ರಾಹುಲ್ಗೆ 7 ಕೋಟಿ, ಜಿತೇಶ್ ಶರ್ಮಾಗೆ 11 ಕೋಟಿ: RCB ಅಚ್ಚರಿಯ ನಿರ್ಧಾರ
IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜಿತೇಶ್ ಶರ್ಮಾ ಅವರನ್ನು ಖರೀದಿಸಿದೆ. ಅದು ಕೂಡ 11 ಕೋಟಿ ರೂ. ನೀಡುವ ಮೂಲಕ ಎಂಬುದೇ ಅಚ್ಚರಿ. ಅತ್ತ ಕೆಎಲ್ ರಾಹುಲ್ ಖರೀದಿಗೆ ಆರ್ಸಿಬಿ ನಿರಾಸಕ್ತಿ ತೋರಿರುವುದು ಇದೀಗ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
Updated on:Nov 25, 2024 | 8:30 AM

ಐಪಿಎಲ್ ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಈ ಆರು ಆಟಗಾರರಲ್ಲಿ ಮೂವರು ಭಾರತೀಯರು, ಮೂವರು ವಿದೇಶಿ ಆಟಗಾರರಿದ್ದಾರೆ.

ಇವರಲ್ಲಿ ಅತ್ಯಧಿಕ ಮೊತ್ತ ಪಡೆದ ಭಾರತೀಯ ಆಟಗಾರನೆಂದರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜಿತೇಶ್ ಶರ್ಮಾ ಅವರನ್ನು ಈ ಬಾರಿ ಆರ್ಸಿಬಿ ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದೆ.

ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಕೆಎಲ್ ರಾಹುಲ್ ಅವರ ಖರೀದಿಗೆ ಆರ್ಸಿಬಿ ಹೆಚ್ಚಿನ ಆಸಕ್ತಿವಹಿಸದಿರುವುದು. ಅಂದರೆ ಮೊದಲ ಸುತ್ತಿನಲ್ಲಿ ಒಂದಷ್ಟು ಬಿಡ್ಡಿಂಗ್ ನಡೆಸಿದ ಆರ್ಸಿಬಿ ಕೆಎಲ್ ರಾಹುಲ್ ಅವರ ಮೌಲ್ಯ 7 ಕೋಟಿ ರೂ. ದಾಟುತ್ತಿದ್ದಂತೆ ಬಿಡ್ಡಿಂಗ್ ನಿಲ್ಲಿಸಿದ್ದರು.

ಅಂದರೆ ಕೆಎಲ್ ರಾಹುಲ್ಗಾಗಿ 7 ಕೋಟಿ ರೂ.ಗಿಂತ ಅಧಿಕ ಮೊತ್ತ ವ್ಯಯಿಸಲು ಆರ್ಸಿಬಿ ಮುಂದಾಗಲಿಲ್ಲ. ಆದರೆ ಅಚ್ಚರಿ ಎಂದರೆ, ಇದೇ ಆರ್ಸಿಬಿ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದರು. ಇಲ್ಲಿ ಎಲ್ಲಾ ರೀತಿಯಲ್ಲೂ ಜಿತೇಶ್ ಶರ್ಮಾಗಿಂತ ಕೆಎಲ್ ರಾಹುಲ್ ಉತ್ತಮ ಆಯ್ಕೆಯಾಗಿತ್ತು.

ಇದಾಗ್ಯೂ ಆರ್ಸಿಬಿ ಆಕ್ಷನ್ ಬಳಗವು ರಾಹುಲ್ ಖರೀದಿಗಾಗಿ ಹೆಚ್ಚಿನ ಆಸಕ್ತಿವಹಿಸದಿರುವುದು ಅಚ್ಚರಿಕೆಗೆ ಕಾರಣವಾಗಿತ್ತು. ಒಂದು ವೇಳೆ ಆರ್ಸಿಬಿ ಜಿತೇಶ್ ಶರ್ಮಾಗೆ ವ್ಯಯಿಸಿದ 11 ಕೋಟಿ ರೂ.ಗಿಂತ ಒಂದೆರಡು ಕೋಟಿ ರೂ. ಹೆಚ್ಚು ನೀಡಿದ್ದರೂ ರಾಹುಲ್ ಆರ್ಸಿಬಿ ಪಾಲಾಗುತ್ತಿತ್ತು.

ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಖರೀದಿಸಿದ್ದು 14 ಕೋಟಿ ರೂ.ಗೆ. ಆರ್ಸಿಬಿ ಫ್ರಾಂಚೈಸಿಯು ನಿರಾಸಕ್ತಿ ತೋರಿದ್ದರಿಂದ ಇದೀಗ ತವರಿನ ತಂಡದ ಪರ ಮತ್ತೆ ಕಣಕ್ಕಿಳಿಯಬೇಕೆಂಬ ಕೆಎಲ್ ರಾಹುಲ್ ಅವರ ಕನಸು ಕಮರಿದೆ. ಇತ್ತ ಕನ್ನಡಿಗನನ್ನು ಮತ್ತೆ ಆರ್ಸಿಬಿ ತಂಡದಲ್ಲಿ ನೋಡಬೇಕೆಂಬ ಕನ್ನಡಿಗರ ಆಸೆಗೂ ತೆರೆಬಿದ್ದಂತಾಗಿದೆ.
Published On - 8:29 am, Mon, 25 November 24
