ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಎಲ್ಲಾ ತಂಡಗಳ ವಿರುದ್ಧ ಕಣಕ್ಕಿಳಿದ ಆಟಗಾರರಲ್ಲಿ ವಿರಾಟ್ ಕೊಹ್ಲಿ (Virat Kohli) ಕೂಡ ಒಬ್ಬರು. 2008 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಕೊಹ್ಲಿ 17 ವರ್ಷಗಳಲ್ಲಿ 14 ತಂಡಗಳ ವಿರುದ್ಧ ಆಡಿದ್ದಾರೆ.
ಈ ತಂಡಗಳಲ್ಲಿ ನೆಚ್ಚಿನ ಎದುರಾಳಿ ಯಾರು ಎಂಬ ಪ್ರಶ್ನೆಗೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡ ಕೊಹ್ಲಿಗೆ ನೆಚ್ಚಿನ ಎದುರಾಳಿ ಯಾರೆಂಬ ಪ್ರಶ್ನೆ ಮುಂದಿಡಲಾಗಿತ್ತು. ಈ ಪ್ರಶ್ನೆಗಳಿಗೆ ಆಯ್ಕೆಯಾಗಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ಹೆಸರಿಸಲಾಗಿತ್ತು.
ಈ ವೇಳೆ ವಿರಾಟ್ ಕೊಹ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿನ ತಮ್ಮ ನೆಚ್ಚಿನ ಎದುರಾಳಿಯಾಗಿ ಕೆಕೆಆರ್ ಪಡೆಯನ್ನು ಆರಿಸಿಕೊಂಡಿದ್ದಾರೆ. ವಿಶೇಷ ಎಂದರೆ ತಮ್ಮ ನೆಚ್ಚಿನ ಎದುರಾಳಿ ತಂಡದ ವಿರುದ್ಧ ಕಿಂಗ್ ಕೊಹ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈವರೆಗೆ 32 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 728 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಒಟ್ಟು 962 ರನ್ ಕಲೆಹಾಕಿದ್ದಾರೆ. ಅಲ್ಲದೆ 2019 ರಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಕೂಡ ಅಬ್ಬರಿಸಿದ್ದರು.
ಇದಾಗ್ಯೂ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ವಿರುದ್ಧ ಎಂಬುದು ವಿಶೇಷ. ಡಿಸಿ ವಿರುದ್ಧ 28 ಇನಿಂಗ್ಸ್ ಆಡಿರುವ ಕೊಹ್ಲಿ 1057 ರನ್ ಕಲೆಹಾಕಿದ್ದಾರೆ. ಹಾಗೆಯೇ ಸಿಎಸ್ಕೆ ವಿರುದ್ಧ 32 ಇನಿಂಗ್ಸ್ಗಳಿಂದ 1053 ರನ್ ಬಾರಿಸಿದ್ದಾರೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಎಲ್ಲಾ ತಂಡಗಳ ವಿರುದ್ಧ ಕೂಡ ಬ್ಯಾಟ್ ಝಳಪಳಿಸಿರುವ ಕೊಹ್ಲಿ 244 ಇನಿಂಗ್ಸ್ಗಳಿಂದ 8004 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ 8 ಸಾವಿರಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
Published On - 8:30 am, Wed, 21 August 24