
ಬಿಗ್ ಬ್ಯಾಷ್ ಲೀಗ್ನ ಫೈನಲ್ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ್ದ ಮಿಚೆಲ್ ಓವನ್ಗೆ ಅದೃಷ್ಟ ಖುಲಾಯಿಸುವ ಲಕ್ಷಣಗಳು ಕಾಣಿಸುತ್ತಿದೆ. ಏಕೆಂದರೆ ಐಪಿಎಲ್ಗೆ ಆಯ್ಕೆಯಾದ ಕೆಲ ಆಟಗಾರರು ಗಾಯಗೊಂಡಿದ್ದು, ಇದರ ಬೆನ್ನಲ್ಲೇ ಮಿಚೆಲ್ ಓವನ್ ಲಭ್ಯತೆಯ ಬಗ್ಗೆ ಕೆಲ ಫ್ರಾಂಚೈಸಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿಗಾಗಿ ಮಿಚೆಲ್ ಓವನ್ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಹರಾಜು ಪಟ್ಟಿಗೆ ಆಯ್ಕೆ ಮಾಡಲಾದ ಶಾರ್ಟ್ ಲಿಸ್ಟ್ನಲ್ಲಿ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಇದೀಗ ಬಿಗ್ ಬ್ಯಾಷ್ ಲೀಗ್ ಮೂಲಕ ಮಿಚೆಲ್ ಓವನ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಗ್ ಬ್ಯಾಷ್ ಲೀಗ್ 2025 ರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮಿಚೆಲ್ ಓವನ್ ಹೆಸರು ಅಗ್ರಸ್ಥಾನದಲ್ಲಿದೆ. ಹೋಬಾರ್ಟ್ ಹರಿಕೇನ್ಸ್ ಪರ 11 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಓವನ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 452 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಸ್ಪೋಟಕ ದಾಂಡಿಗನನ್ನು ಐಪಿಎಲ್ಗೆ ಕರೆತರಲು ಕೆಲ ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾ ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಬೆನ್ನು ನೋವಿನ ಕಾರಣ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಮಾರ್ಷ್ ಅವರು ಐಪಿಎಲ್ಗೆ ಅಲಭ್ಯರಾಗುವ ಸಾಧ್ಯತೆಯಿದೆ.

ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುವ ಡೆವೊನ್ ಕಾನ್ವೆ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಗಾಯಗೊಂಡಿದ್ದಾರೆ. ಮುಂಬರುವ ಐಪಿಎಲ್ಗೂ ಮುನ್ನ ಸಂಪೂರ್ಣ ಗುಣಮುಖರಾಗದಿದ್ದರೆ ಅವರು ಸಹ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಬಹುದು.

ಇಲ್ಲಿ ಮಿಚೆಲ್ ಮಾರ್ಷ್ ಹಾಗೂ ಡೆವೊನ್ ಕಾನ್ವೆ ಐಪಿಎಲ್ನಿಂದ ಹೊರಗುಳಿದರೆ ಸಿಎಸ್ಕೆ ಮತ್ತು ಎಲ್ಎಸ್ಜಿ ಫ್ರಾಂಚೈಸಿಗಳು ಬದಲಿ ಆಟಗಾರರನ್ನು ಆಯ್ಕೆ ಮಾಡುವುದು ಖಚಿತ. ಪ್ರಸ್ತುತ ಫಾರ್ಮ್ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಮಿಚೆಲ್ ಓವನ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಈ ತಂಡಗಳಿಗೆ ಬದಲಿ ಆಟಗಾರನಾಗಿ ಮಿಚೆಲ್ ಓವನ್ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.

ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮಾಲೀಕತ್ವದ ಪಾರ್ಲ್ ರಾಯಲ್ಸ್ ಪರ ಸೌತ್ ಆಫ್ರಿಕಾ ಟಿ20 ಲೀಗ್ ಆಡಲು ಮಿಚೆಲ್ ಓವನ್ ಅವರೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪಾರ್ಲ್ ರಾಯಲ್ಸ್ ತಂಡದ ಆಟಗಾರ ಜೋ ರೂಟ್ ಭಾರತ ವಿರುದ್ಧದ ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಕೂಡಿಕೊಂಡಿದ್ದಾರೆ.

ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೋ ರೂಟ್ ಬದಲಿಯಾಗಿ ಬಿಗ್ ಬ್ಯಾಷ್ ಲೀಗ್ ಫೈನಲ್ ಹೀರೋ ಮಿಚೆಲ್ ಓವನ್ ಅವರನ್ನು ಪಾರ್ಲ್ ರಾಯಲ್ಸ್ ತಂಡಕ್ಕೆ ಕರೆ ತಂದಿದ್ದಾರೆ. ಹೀಗಾಗಿ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬದಲಿ ಆಯ್ಕೆ ಲಭ್ಯವಾದರೆ, ಮಿಚೆಲ್ ಓವನ್ ಅವರನ್ನು ಆಯ್ಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
Published On - 10:08 am, Sun, 2 February 25