ಧೋನಿಯ ದಾಖಲೆ ಮುರಿದ ದಿನೇಶ್ ಕಾರ್ತಿಕ್
Dinesh Karthik: ಸೌತ್ ಆಫ್ರಿಕಾ ಟಿ20 ಲೀಗ್ ಆಡಿದ ಮೊದಲ ಭಾರತೀಯ ಆಟಗಾರನೆಂದರೆ ಅದು ದಿನೇಶ್ ಕಾರ್ತಿಕ್. ಇದೀಗ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ, ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಅರ್ಧಶತಕದೊಂದಿಗೆ ಧೋನಿಯ ದಾಖಲೆಯೊಂದನ್ನು ಸಹ ಡಿಕೆ ಮುರಿದಿದ್ದಾರೆ.
Updated on: Feb 02, 2025 | 2:08 PM

ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನಲ್ಲಿ ಅರ್ಧಶತಕ ಬಾರಿಸುವ ಮೂಲಕ ದಿನೇಶ್ ಕಾರ್ತಿಕ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಸೌತ್ ಆಫ್ರಿಕಾ ಟಿ20 ಲೀಗ್ನ 26ನೇ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಪರ ಕಣಕ್ಕಿಳಿದ ದಿನೇಶ್ ಕಾರ್ತಿಕ್, ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ 39 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 53 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಟಿ20 ಕ್ರಿಕೆಟ್ನಲ್ಲಿ ಈವರೆಗೆ 342 ಇನಿಂಗ್ಸ್ ಆಡಿರುವ ಧೋನಿ 28 ಅರ್ಧಶತಕಗಳೊಂದಿಗೆ 7432 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ದಿನೇಶ್ ಕಾರ್ತಿಕ್ ಮುರಿದಿದ್ದಾರೆ.

ದಿನೇಶ್ ಕಾರ್ತಿಕ್ ಈವರೆಗೆ 362 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ 35 ಅರ್ಧಶತಕಗಳೊಂದಿಗೆ ಒಟ್ಟು 7504 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ದಿನೇಶ್ ಕಾರ್ತಿಕ್ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯಲು ಮಹೇಂದ್ರ ಸಿಂಗ್ ಧೋನಿಗೂ ಉತ್ತಮ ಅವಕಾಶವಿದೆ. ಏಕೆಂದರೆ ಮುಂಬರುವ ಐಪಿಎಲ್ನಲ್ಲಿ ಧೋನಿ ಆಟಗಾರನಾಗಿ ಕಣಕ್ಕಿಳಿದರೆ, ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಧೋನಿ 100 ರನ್ ಕಲೆಹಾಕಿದರೆ, ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ.
























