
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಗಳಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗುವ ಸಾಧ್ಯತೆಯಿದೆ. ಏಕೆಂದರೆ ತಂಡದ ಪ್ರಮುಖ ಆಟಗಾರ ನಿರ್ಣಾಯಕ ಪಂದ್ಯಗಳಿಗೂ ಮುನ್ನ ತವರಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಹೌದು, ಆರ್ಸಿಬಿ ತಂಡದ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಐಪಿಎಲ್ನ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಸಾಲ್ಟ್ ತಂದೆಯಾಗುತ್ತಿರುವುದು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಾಲ್ಟ್ ಶೀಘ್ರದಲ್ಲೇ ಇಂಗ್ಲೆಂಡ್ಗೆ ಮರಳಲಿದ್ದು, ಈ ಮೂಲಕ ದೀರ್ಘಕಾಲದ ಗೆಳತಿ ಅಬಿ ಮೆಕ್‌ಲಾವೆನ್ ಅವರ ಆರೈಕೆಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಫಿಲ್ ಸಾಲ್ಟ್ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇತ್ತ ಸಾಲ್ಟ್ ಅಲಭ್ಯರಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಿಮ್ ಸೈಫರ್ಟ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಿದೆ. ಏಕೆಂದರೆ ನ್ಯೂಝಿಲೆಂಡ್ ಪರ ಸೈಫರ್ಟ್ ಆರಂಭಿಕನಾಗಿ ಕಣಕ್ಕಿಳಿಯುವ ದಾಂಡಿಗ. ಹೀಗಾಗಿ ಫಿಲ್ ಸಾಲ್ಟ್ ಬದಲಿಯಾಗಿ ಕಿವೀಸ್ ಬ್ಯಾಟರ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಹಾಗೆಯೇ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಲುಂಗಿ ಎನ್ಗಿಡಿ ಹಾಗೂ ಜೇಕಬ್ ಬೆಥೆಲ್ ಕೂಡ ಅಲಭ್ಯರಾಗಿದ್ದಾರೆ. ವಿಶ್ವ ಟೆಸ್ಟ್ ಚಾಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲು ಎನ್ಗಿಡಿ ತವರಿಗೆ ಹಿಂತಿರುಗಿದರೆ, ಬೆಥೆಲ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ಗೆ ಮರಳಲಿದ್ದಾರೆ.

ಇತ್ತ ಲುಂಗಿ ಎನ್ಗಿಡಿ ಬದಲಿಗೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟರೆ, ಜೇಕಬ್ ಬೆಥೆಲ್ ಬದಲಿಯಾಗಿ ನ್ಯೂಝಿಲೆಂಡ್ನ ಟಿಮ್ ಸೈಫರ್ಟ್ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ಲೇಆಫ್ ಪಂದ್ಯಗಳಿಗೂ ಮುನ್ನ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸದ್ಯ ಪ್ಲೇಆಫ್ಗೆ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಜಯ ಸಾಧಿಸಿದರೆ, ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರಲಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು.