IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈವರೆಗೆ ಆಡಿದ 13 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದ್ದು, ಈ ಗೆಲುವುಗಳೊಂದಿಗೆ ಇದೀಗ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಆದರೆ ಪ್ಲೇಆಫ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡಕ್ಕೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟಿದ್ದಾರೆ.
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಝಿಂಬಾಬ್ವೆ (ರೋಡೇಷಿಯನ್) ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಮುಝರಬಾನಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ ಇದೀಗ ಬದಲಿ ಆಟಗಾರನಾಗಿ ಆಗಮಿಸಿರುವ ಮುಝರಬಾನಿ ಲಕ್ನೋದಲ್ಲಿ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ.
1 / 5
ಆರ್ಸಿಬಿ ತಂಡದಲ್ಲಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ತವರಿಗೆ ಮರಳಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಅಭ್ಯಾಸಕ್ಕಾಗಿ ಎನ್ಗಿಡಿ ಅರ್ಧದಲ್ಲೇ ಟೂರ್ನಿ ತೊರೆದಿದ್ದಾರೆ. ಹೀಗಾಗಿ ಅವರ ಬದಲಿಗೆ ಬ್ಲೆಸಿಂಗ್ ಮುಝರಬಾನಿಯನ್ನು ಆಯ್ಕೆ ಮಾಡಲಾಗಿದೆ.
2 / 5
ಝಿಂಬಾಬ್ವೆ ಪರ 67 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಮುಝರಬಾನಿ ಬರೋಬ್ಬರಿ 78 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅದು ಕೂಡ ಪ್ರತಿ ಓವರ್ಗೆ 7.03 ಸರಾಸರಿಯಲ್ಲಿ ರನ್ ಬಿಟ್ಟು ಕೊಡುವ ಮೂಲಕ ಎಂಬುದು ವಿಶೇಷ. ಅಂದರೆ ಬ್ಲೆಸಿಂಗ್ ಮುಝರಬಾನಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿದ್ದಾರೆ.
3 / 5
ಬ್ಲೆಸಿಂಗ್ ಮುಝರಬಾನಿಯನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಆರ್ಸಿಬಿ ತಂಡದ ಕೋಚ್ ಆ್ಯಂಡಿ ಫ್ಲವರ್. ಝಿಂಬಾಬ್ವೆ ಮೂಲದವರಾಗಿರುವ ಫ್ಲವರ್ಗೆ ಮುಝರಬಾನಿ ಸಾಮರ್ಥ್ಯದ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿದೆ. ಈ ಹಿಂದೆ ಆ್ಯಂಡಿ ಫ್ಲವರ್ ಕೋಚಿಂಗ್ನಲ್ಲಿ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಗಲ್ಫ್ ಜೈಂಟ್ಸ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ಸ್ ಪರ ಬ್ಲೆಸಿಂಗ್ ಮುಝರಬಾನಿ ಕಣಕ್ಕಿಳಿದಿದ್ದರು.
4 / 5
2021ರ ಪಿಎಸ್ಎಲ್ನಲ್ಲಿ ಕೋಚ್ ಆ್ಯಂಡಿ ಫ್ಲವರ್ ಮುಂದಾಳತ್ವದ ಮುಲ್ತಾನ್ ಸುಲ್ತಾನ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಬ್ಲೆಸಿಂಗ್ ಮುಝರಬಾನಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿಯೇ ಆ್ಯಂಡಿ ಫ್ಲವರ್ ಝಿಂಬಾಬ್ವೆ ವೇಗಿಗೆ ಮಣೆ ಹಾಕಿದ್ದಾರೆ ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾದ ಮೊದಲ ಝಿಂಬಾಬ್ವೆ ಆಟಗಾರ ಎಂಬ ಹೆಗ್ಗಳಿಕೆಯನ್ನು ಬ್ಲೆಸಿಂಗ್ ಮುಝರಬಾನಿ ತಮ್ಮದಾಗಿಸಿಕೊಂಡಿದ್ದಾರೆ.