
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಒಂದು ವಾರದವರೆಗೆ ಮುಂದೂಡಲಾಗಿದೆ. ಈ ಮುಂದೂಡುವಿಕೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೊಸ ಸಮಸ್ಯೆಯನ್ನು ಉಂಟು ಮಾಡಬಹುದು. ಏಕೆಂದರೆ ಒಂದು ವಾರದ ಬಳಿಕ ಐಪಿಎಲ್ ಮತ್ತೆ ಆಯೋಜನೆಗೊಂಡರೆ, ಕೆಲ ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ.

ಅದರಲ್ಲೂ ಆರ್ಸಿಬಿ ತಂಡದ ಆಧಾರಸ್ತಂಭವೆಂದರೆ ಇಂಗ್ಲೆಂಡ್ ಆಟಗಾರರು. ಏಕೆಂದರೆ ಈ ಬಾರಿ ಆರ್ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಒಂದು ವೇಳೆ ಐಪಿಎಲ್ ಆರಂಭ ತಡವಾದರೆ, ಮುಂದಿನ ಪಂದ್ಯಗಳಿಗೆ ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್ ಹಾಗೂ ಫಿಲ್ ಸಾಲ್ಟ್ ಅಲಭ್ಯರಾಗುವುದು ಖಚಿತ.

ಏಕೆಂದರೆ ಮೇ 22 ರಿಂದ ಇಂಗ್ಲೆಂಡ್ ಹಾಗೂ ಝಿಂಬಾಬ್ವೆ ನಡುವಣ ಟೆಸ್ಟ್ ಸರಣಿ ಶುರುವಾಗಲಿದೆ. ಇದರ ಬೆನ್ನಲ್ಲೇ ಮೇ. 29 ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಕೂಡ ಆರಂಭವಾಗುತ್ತಿದೆ. ಈ ಸರಣಿಗಳಿಗೆ ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಫಿಲ್ ಸಾಲ್ಟ್ ಆಯ್ಕೆಯಾಗುವುದು ಖಚಿತ ಎನ್ನಬಹುದು.

ಅತ್ತ ಇಂಗ್ಲೆಂಡ್ ವಿರುದ್ಧದ ಸರಣಿಗೆ ಈಗಾಗಲೇ ವೆಸ್ಟ್ ಇಂಡೀಸ್ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಆರ್ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದರೆ ಐಪಿಎಲ್ ತಡವಾಗಿ ಆರಂಭವಾದರೆ, ಆರ್ಸಿಬಿ ತಂಡದಿಂದ ರೊಮಾರಿಯೊ ಶೆಫರ್ಡ್, ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಹೊರಗುಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.

ಈ ನಾಲ್ವರು ಪ್ರಮುಖ ಆಟಗಾರರು ಆರ್ಸಿಬಿ ತಂಡದಿಂದ ಹೊರಗುಳಿದರೆ, ಟೀಮ್ನಲ್ಲಿ ವಿದೇಶಿ ಆಟಗಾರರಾಗಿ ಉಳಿಯುವುದು ಸೌತ್ ಆಫ್ರಿಕಾದ ಲುಂಗಿ ಎನ್ಗಿಡಿ, ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್, ಟಿಮ್ ಡೇವಿಡ್ ಹಾಗೂ ಶ್ರೀಲಂಕಾದ ನುವಾನ್ ತುಷಾರ ಮಾತ್ರ. ಹೀಗಾಗಿ ಕೊನೆಯ ಪಂದ್ಯಗಳಿಗೆ ಆರ್ಸಿಬಿ ನಾಲ್ವರು ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.