- Kannada News Photo gallery Cricket photos IPL 2025 Rishabh Pant set to join RCB says reports kannada news
IPL 2025: ಆರ್ಸಿಬಿಗೆ ಬಂತು ಆನೆ ಬಲ; ತಂಡ ಸೇರಿಕೊಳ್ಳಲಿದ್ದಾರಂತೆ ರಿಷಬ್ ಪಂತ್..!
RCB: ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ರಿಷಬ್ ಪಂತ್ರನ್ನು ಡೆಲ್ಲಿ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇತ್ತ ಮೆಗಾ ಹರಾಜಿನಲ್ಲಿ ಪಂತ್ರನ್ನು ಖರೀದಿಸಲು ಆರ್ಸಿಬಿ ಉತ್ಸುಕವಾಗಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಪಂತ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
Updated on: Oct 23, 2024 | 5:20 PM

2025 ರ ಐಪಿಎಲ್ ಮೆಗಾ ಹರಾಜಿಗೆ ಈಗಾಗಲೇ ಸಿದ್ಧತೆಗಳು ಬರದಿಂದ ಸಾಗುತ್ತಿವೆ. ಈ ಮಿಲಿಯನ್ ಡಾಲರ್ ಟೂರ್ನಿಯ ಹರಾಜನ್ನು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಅದಕ್ಕೂ ಮುನ್ನ ರಿಷಬ್ ಪಂತ್ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ರಿಷಬ್ ಪಂತ್, ಮುಂದಿನ ಆವೃತ್ತಿಯಿಂದ ಆರ್ಸಿಬಿ ಪರ ಕಣಕ್ಕಿಳಿಯುವುದು ಎಂದು ವರದಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ರಿಷಬ್ ಪಂತ್ರನ್ನು ಡೆಲ್ಲಿ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ. ಇತ್ತ ಮೆಗಾ ಹರಾಜಿನಲ್ಲಿ ಪಂತ್ರನ್ನು ಖರೀದಿಸಲು ಆರ್ಸಿಬಿ ಉತ್ಸುಕವಾಗಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಪಂತ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ವರದಿ ಮಾಡಿದೆ.

ಇದಕ್ಕೆ ಪೂರಕ ಕಾರಣವೂ ಇದ್ದು ಆರ್ಸಿಬಿ, ಭವಿಷ್ಯದ ನಾಯಕನನ್ನು ಹುಡುಕುತ್ತಿದೆ. ತಂಡವನ್ನು ಮುನ್ನಡೆಸುತ್ತಿರುವ ಹಾಲಿ ನಾಯಕ ಫಾಫ್ ಡುಪ್ಲೆಸಿಸ್ಗೆ ವಯಸ್ಸಾಗುತ್ತಿದೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಭಾರತದ ಆಟಗಾರನನ್ನು ತಂದು ಕೂರಿಸಿಲು ಆರ್ಸಿಬಿ ಫ್ರಾಂಚೈಸಿ ಯೋಚಿಸಿದೆ. ಒಂದು ವೇಳೆ ಪಂತ್ ಆರ್ಸಿಬಿ ತಂಡವನ್ನು ಸೇರಿಕೊಂಡರೆ, ತಂಡಕ್ಕೆ ಪ್ರಮುಖವಾಗಿ ಎರಡು ಲಾಭಗಳಾಗಲಿವೆ.

ಮೊದಲನೆಯದ್ದು, ತಂಡಕ್ಕೆ ಯುವ ನಾಯಕ ಸಿಕ್ಕಂತ್ತಾಗುತ್ತದೆ. ಪಂತ್ಗೆ ಈಗಾಗಲೇ ನಾಯಕತ್ವ ನಿಭಾಯಿಸಿದ ಅನುಭವವಿದೆ. ಅಲ್ಲದೆ ವಯಸ್ಸಿನ ವಿಚಾರದಲ್ಲಿ ಪಂತ್ ಇನ್ನು ಸಾಕಷ್ಟು ವರ್ಷ ಕ್ರಿಕೆಟ್ ಆಡುವುದು ಬಾಕಿ ಇದೆ. ಹೀಗಾಗಿ ಪಂತ್, ಆರ್ಸಿಬಿ ತಂಡವನ್ನು ಸೇರಿಕೊಂಡರೆ, ಅವರು ದೀರ್ಘ ಕಾಲ ತಂಡದಲ್ಲಿ ಉಳಿಯಲಿದ್ದಾರೆ.

ಎರಡನೇಯದ್ದು, ಪಂತ್ ಸ್ಫೋಟಕ ಬ್ಯಾಟ್ಸ್‌ಮನ್ ಅಲ್ಲದೆ ಅದ್ಭುತ ವಿಕೆಟ್‌ಕೀಪರ್ ಕೂಡ ಆಗಿದ್ದಾರೆ. ಕಳೆದ ಆವೃತ್ತಿಯ ಬಳಿಕ ಕ್ರಿಕೆಟ್ಗೆ ವಿದಾಯ ಹೇಳಿದ್ದ ದಿನೇಶ್ ಕಾರ್ತಿಕ್ ನಿರ್ವಹಿಸುತ್ತಿದ್ದ ಕೆಲಸವನ್ನು ರಿಷಬ್ ಪಂತ್ ಮುಂದುವರೆಸಲಿದ್ದಾರೆ. ಹಾಗೆಯೇ ತಂಡಕ್ಕೆ ಸಮಸ್ಯೆಯಾಗಿರುವ ಮಧ್ಯಮ ಕ್ರಮಾಂಕಕ್ಕೆ ಪಂತ್ ಆನೆಬಲವನ್ನು ತಂದುಕೊಡಲಿದ್ದಾರೆ.

ಇನ್ನು ಕಳೆದ ಐಪಿಎಲ್ನಲ್ಲಿ ಡೆಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ರಿಷಬ್ ಪಂತ್ 40.55 ಸರಾಸರಿಯಲ್ಲಿ 3 ಅರ್ಧಶತಕಗಳ ನೆರವಿನಿಂದ 446 ರನ್ ಗಳಿಸಿದ್ದರು. ಇಲ್ಲಿಯವರೆಗೆ, ಡೆಲ್ಲಿ ಪರ 111 ಪಂದ್ಯಗಳನ್ನಾಡಿರುವ ಪಂತ್, 35.31 ಸರಾಸರಿಯಲ್ಲಿ 3284 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಸೇರಿದಂತೆ 18 ಅರ್ಧ ಶತಕಗಳನ್ನು ಸಹ ದಾಖಲಿಸಿದ್ದಾರೆ.
