
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಒಂದೆಡೆ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಭುಜದ ನೋವಿನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ರೊಮಾರಿಯೊ ಶೆಫರ್ಡ್ (Romario Shepherd) ನಿರ್ಣಾಯಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಆರ್ಸಿಬಿ ತಂಡದ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಮುಂದಿನ ವಾರ ವೆಸ್ಟ್ ಇಂಡೀಸ್ಗೆ ಹಿಂತಿರುಗುವ ಸಾಧ್ಯತೆಯಿದೆ. ಏಕೆಂದರೆ ಮೇ 21 ರಿಂದ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ವಿರುದ್ಧ ಸರಣಿ ಆಡಲಿದ್ದು. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ವೆಸ್ಟ್ ಇಂಡೀಸ್ ತಂಡದಲ್ಲಿ ರೊಮಾರಿಯೊ ಶೆಫರ್ಡ್ ಕಾಣಿಸಿಕೊಂಡಿದ್ದಾರೆ.

ಹೀಗಾಗಿ ಮೇ 17ರ ಬಳಿಕ ರೊಮಾರಿಯೊ ಶೆಫರ್ಡ್ ತವರಿಗೆ ಹಿಂತಿರುವ ಸಾಧ್ಯತೆ ಹೆಚ್ಚಿದೆ. ಅಂದರೆ ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 17 ರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದ ಬಳಿಕ ಶೆಫರ್ಡ್ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲು ಕೆರಿಬಿಯನ್ ದ್ವೀಪಕ್ಕೆ ಮರಳಲಿದ್ದಾರೆ ಎನ್ನಬಹುದು.

ಇತ್ತ ಐಪಿಎಲ್ ಪ್ಲೇಆಫ್ ಪಂದ್ಯಗಳು ಮೇ 20 ರಿಂದ ಶುರುವಾಗಲಿದೆ. ಮೇ 20 ರಂದು ಕ್ವಾಲಿಫೈಯರ್ 1 ಪಂಧ್ಯ ನಡೆದರೆ, ಮೇ 21 ರಂದು ಎಲಿಮಿನೇಟರ್ ಪಂದ್ಯ ಜರುಗಲಿದೆ. ಇದಾದ ಬಳಿಕ ಮೇ 23 ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಹಾಗೆಯೇ ಫೈನಲ್ ಪಂದ್ಯವು ಮೇ 25 ರಂದು ಜರುಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಒಂದು ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಇದಾಗ್ಯೂ ಪ್ಲೇಆಫ್ ಪಂದ್ಯಗಳಲ್ಲಿ ಹೊಡಿಬಡಿ ದಾಂಡಿಗ ರೊಮಾರಿಯೊ ಶೆಫರ್ಡ್ ಕಾಣಿಸಿಕೊಳ್ಳುವುದು ಅನುಮಾನ ಎಂದೇ ಹೇಳಬಹುದು.