
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಅತೀ ಕಡಿಮೆ ಓವರ್ಗಳಲ್ಲಿ 200+ ರನ್ಗಳ ಚೇಸ್ ಮಾಡುವ ಮೂಲಕ. ಹೀಗೆ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದು ರಾಜಸ್ಥಾನ್ ರಾಯಲ್ಸ್ (RR) ತಂಡ. ಈ ಮೂಲಕ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಆರ್ಆರ್ ಪಡೆ ಮುರಿದಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭ್ಮನ್ ಗಿಲ್ (84) ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಯ ನೆರವಿನೊಂದಿಗೆ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 209 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎಡಗೈ ದಾಂಡಿಗರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿದ್ದರು. ಇಬ್ಬರು ಯುವ ದಾಂಡಿಗ ಆರ್ಭಟಕ್ಕೆ ನಲುಗಿದ ಗುಜರಾತ್ ಟೈಟಾನ್ಸ್ ತಂಡವು ಪವರ್ಪ್ಲೇನಲ್ಲೇ 87 ರನ್ಗಳನ್ನು ಬಿಟ್ಟುಕೊಟ್ಟರು.

ಪವರ್ಪ್ಲೇ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ರಾಜಸ್ಥಾನ್ ರಾಯಲ್ಸ್ ಓಪನರ್ಗಳು ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಇದರ ನಡುವೆ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ಭರ್ಜರಿ ದಾಖಲೆ ನಿರ್ಮಿಸಿದರು. ಅಲ್ಲದೆ ಮೊದಲ ವಿಕೆಟ್ಗೆ 166 ರನ್ಗಳ ಜೊತೆಯಾಟವಾಡಿದ ಬಳಿಕ ವೈಭವ್ ಸೂರ್ಯವಂಶಿ (101) ವಿಕೆಟ್ ಒಪ್ಪಿಸಿದರು.

ಆ ಬಳಿಕ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ ಅಜೇಯ 70 ರನ್ ಬಾರಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ 15 ಎಸೆತಗಳಲ್ಲಿ 32 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 15.5 ಓವರ್ಗಳಲ್ಲಿ 212 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 200+ ರನ್ ಸ್ಕೋರ್ ಚೇಸ್ ಮಾಡಿ ಗೆದ್ದ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು. 2024 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 16 ಓವರ್ಗಳಲ್ಲಿ 201 ರನ್ಗಳನ್ನು ಬೆನ್ನತ್ತಿ ಆರ್ಸಿಬಿ ತಂಡವು ಈ ಭರ್ಜರಿ ದಾಖಲೆ ನಿರ್ಮಿಸಿತ್ತು.

ಇದೀಗ ಕೇವಲ 15.5 ಓವರ್ಗಳಲ್ಲಿ 212 ರನ್ಗಳನ್ನು ಬೆನ್ನತ್ತುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 200+ ಸ್ಕೋರ್ ಚೇಸ್ ಮಾಡಿದ ತಂಡವೆಂಬ ಹೆಗ್ಗಳಿಕೆಯನ್ನು ಆರ್ಆರ್ ಪಡೆ ತನ್ನದಾಗಿಸಿಕೊಂಡಿದೆ.