
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ಎಸೆತಗಳನ್ನು ಎಸೆದ ಬೌಲರ್ಗಳ ಪಟ್ಟಿಗೆ ಸಂದೀಪ್ ಶರ್ಮಾ (Sandeep Sharma) ಹೆಸರು ಕೂಡ ಸೇರ್ಪಡೆಯಾಗಿದೆ. ಅದು ನಿರ್ಣಾಯಕ ಹಂತದಲ್ಲಿ ದೀರ್ಘಾವಧಿ ಬೌಲಿಂಗ್ ಮಾಡುವ ಮೂಲಕ ಎಂಬುದು ವಿಶೇಷ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್ಗಳಲ್ಲಿ 169 ರನ್ ಕಲೆಹಾಕಿತು. ಇನ್ನು ಕೊನೆಯ ಓವರ್ ಎಸೆಯಲು ಸ್ಯಾಮ್ಸನ್ ಚೆಂಡನ್ನು ಸಂದೀಪ್ ಶರ್ಮಾ ಅವರ ಕೈಗಿಟ್ಟರು.

ಅದರಂತೆ 20ನೇ ಓವರ್ ಶುರು ಮಾಡಿದ ಸಂದೀಪ್ ಶರ್ಮಾ 4 ವೈಡ್ಗಳನ್ನು ಎಸೆದರು. ಮೊದಲ ಎಸೆತ ವೈಡ್ ಆದರೆ, ಮರು ಎಸೆದಲ್ಲಿ ಯಾವುದೇ ರನ್ ನೀಡಿರಲಿಲ್ಲ. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ 3 ವೈಡ್ ಎಸೆದರು. ಇನ್ನು ಮರು ಎಸೆತ ನೋ ಬಾಲ್. ಆ ಬಳಿಕ ಫೋರ್ ನೀಡಿದರು. ಮೂರನೇ ಎಸೆತದಲ್ಲಿ ಸಿಕ್ಸ್ ಚಚ್ಚಿಸಿಕೊಂಡರು. ಇದಾದ ಬಳಿಕ ಮೂರು ಎಸೆತಗಳಲ್ಲಿ ಕೇವಲ 3 ರನ್ ಮಾತ್ರ ನೀಡಿದರು.

ಹೀಗೆ ಸಂದೀಪ್ ಶರ್ಮಾ 20ನೇ ಓವರ್ನಲ್ಲಿ ಬರೋಬ್ಬರಿ 11 ಎಸೆತಗಳನ್ನು ಎಸೆದರು. ಇದು ಐಪಿಎಲ್ ಇತಿಹಾಸದ ದೀರ್ಘಾವಧಿಯ ಓವರ್ಗಳಲ್ಲಿ ಒಂದು ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಈವರೆಗೆ ನಾಲ್ವರು ಬೌಲರ್ಗಳು ಮಾತ್ರ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದಾರೆ.

ಇದಕ್ಕೂ ಮುನ್ನ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊಹಮ್ಮದ್ ಸಿರಾಜ್ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದಾದ ಬಳಿಕ 2023 ರಲ್ಲೇ ತುಷಾರ್ ದೇಶಪಾಂಡೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಒಂದು ಓವರ್ನಲ್ಲಿ 11 ಎಸೆತಗಳನ್ನು ಬೌಲ್ ಮಾಡಿದ್ದರು. ಇನ್ನು 2025 ರಲ್ಲಿ ಕೆಕೆಆರ್ ವಿರುದ್ಧ ಒಂದೇ ಓವರ್ನಲ್ಲಿ 11 ಎಸೆತ ಎಸೆದು ಶಾರ್ದೂಲ್ ಠಾಕೂರ್ ಈ ಹೀನಾಯ ದಾಖಲೆ ಸರಿಗಟ್ಟಿದ್ದರು.

ಇದೀಗ ಸಂದೀಪ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ಓವರ್ನಲ್ಲಿ Wd, 0, Wd, Wd, Wd, N1, 4, 6, 1, 1, 1 ರನ್ ನೀಡುವ ಮೂಲಕ ಒಟ್ಟು 11 ಎಸೆತಗಳನ್ನು ಎಸೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ಎಸೆತಗಳನ್ನು ಎಸೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.