IPL 2025: ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದ ಶ್ರೇಯಸ್ ಅಯ್ಯರ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ (ಐಪಿಎಲ್ 2025) ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ವೇಳೆ 8 ಗೆಲುವು ದಾಖಲಿಸಿರುವ ಪಂಜಾಬ್ ಪಡೆ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೂಲಕ 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ ಆಡಲು ಸಜ್ಜಾಗಿ ನಿಂತಿದೆ.
Updated on: May 20, 2025 | 1:30 PM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬರೋಬ್ಬರಿ 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಪಂಜಾಬ್ ಪಡೆ ಪ್ಲೇಆಫ್ ಆಡಿದ್ದು 2014 ರಲ್ಲಿ. ಇದಾದ ಬಳಿಕ ಒಮ್ಮೆಯೂ ಟಾಪ್-4 ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ (Shreyas Iyer) ಮುಂದಾಳತ್ವದಲ್ಲಿ ಕಣಕ್ಕಿಳಿದಿರುವ ಪಂಜಾಬ್ ಕಿಂಗ್ಸ್ ಲೀಗ್ ಹಂತದ ಪಂದ್ಯಗಳ ಮುಕ್ತಾಯಕ್ಕೂ ಮುನ್ನವೇ ಪ್ಲೇಆಫ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.

ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಮೊದಲ ನಾಯಕ ಎಂಬ ದಾಖಲೆಯೊಂದು ಶ್ರೇಯಸ್ ಅಯ್ಯರ್ ಪಾಲಾಗಿದೆ. ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಈವರೆಗೆ ಮೂರು ತಂಡಗಳನ್ನು ಮುನ್ನಡೆಸಿದ್ದಾರೆ. ಈ ಮೂರು ತಂಡಗಳು ಕೂಡ ಪ್ಲೇಆಫ್ಗೆ ಪ್ರವೇಶಿಸಿದೆ ಎಂಬುದೇ ವಿಶೇಷ.

2019 ಮತ್ತು 2020 ರಲ್ಲಿ ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಡೆಲ್ಲಿ ಪಡೆ ಪ್ಲೇಆಫ್ಗೇರಿತ್ತು. ಅದರಲ್ಲೂ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್ಗೇರಿಸುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು.

2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್, ಕೆಕೆಆರ್ ಪಡೆಗೆ 10 ವರ್ಷಗಳ ಬಳಿಕ ಟ್ರೋಫಿ ಗೆದ್ದು ಕೊಡುವಲ್ಲಿ ಯಶಸ್ವಿಯಾದರು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ 2ನೇ ಕ್ಯಾಪ್ಟನ್ ಎನಿಸಿಕೊಂಡರು.

ಇದೀಗ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಚೊಚ್ಚಲ ಸೀಸನ್ನಲ್ಲೇ ಪಂಜಾಬ್ ಪಡೆಯನ್ನು ಪ್ಲೇಆಫ್ಗೆ ತಲುಪಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಏಕೈಕ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ.




