IPL 2025 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಲ್ಲಿದೆ ಮಾಹಿತಿ
IPL 2025: ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಪ್ರತಿ ಸೀಸನ್ಗೂ ಪಂದ್ಯಗಳ ಹೆಚ್ಚಳ ಮಾಡಬೇಕಿದೆ. ಅದರಂತೆ ಐಪಿಎಲ್ ಸೀಸನ್ 18 ಮತ್ತು 19 ರಲ್ಲಿ ತಲಾ 84 ಪಂದ್ಯಗಳ ಟೂರ್ನಿಯನ್ನು ಆಯೋಜಿಸಬೇಕು. ಹಾಗೆಯೇ ಐಪಿಎಲ್ 2027 ರಲ್ಲಿ ಈ ಸಂಖ್ಯೆಯನ್ನು 97 ಕ್ಕೆ ಏರಿಸಬೇಕು.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಬಿಸಿಸಿಐ ಐಪಿಎಲ್ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡುವಾಗ ತೆಗೆದುಕೊಂಡ ತೀರ್ಮಾನ. ಅಂದರೆ 2022 ರಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದ ವೇಳೆ 2025 ರಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ 74 ಪಂದ್ಯಗಳ ಬದಲಿಗೆ 84 ಮ್ಯಾಚ್ಗಳು ನಡೆಯಲಿದೆ ಎನ್ನಲಾಗಿತ್ತು.
2 / 5
ಆದರೀಗ ಬಿಸಿಸಿಐ ಈ ಮಹತ್ವದ ನಿರ್ಧಾರದಿಂದ ಹಿಂದೆ ಸರಿದಿದೆ. ಇದಕ್ಕೆ ಕಾರಣ ಆಟಗಾರರ ಕೆಲಸದ ಒತ್ತಡ. ಐಪಿಎಲ್ನಲ್ಲಿ ಕಣಕ್ಕಿಳಿಯಲಿರುವ ಆಟಗಾರರು ಈ ವರ್ಷ ಸತತ ಪಂದ್ಯಾವಳಿಯನ್ನು ಆಡಲಿದ್ದಾರೆ. ಹೀಗಾಗಿ ಆಟಗಾರರ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ 10 ಪಂದ್ಯಗಳ ಹೆಚ್ಚಳದ ನಿರ್ಧಾರವನ್ನು ಬಿಸಿಸಿಐ ಕೈ ಬಿಟ್ಟಿದೆ. ಅದರಂತೆ ಈ ಬಾರಿ ಕೂಡ ಐಪಿಎಲ್ನಲ್ಲಿ ಪ್ಲೇಆಫ್ ಸೇರಿದಂತೆ ಒಟ್ಟು 74 ಪಂದ್ಯಗಳೇ ನಡೆಯಲಿದೆ.
3 / 5
ಇದಕ್ಕೂ ಮುನ್ನ ಐಪಿಎಲ್ 2025 ರಲ್ಲಿ ಒಟ್ಟು 84 ಪಂದ್ಯಗಳನ್ನು ಆಡಿಸಲು ಪ್ಲ್ಯಾನ್ ರೂಪಿಸಲಾಗಿತ್ತು. ಅದರಂತೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಹಾಗೆಯೇ ಐಪಿಎಲ್ 2027 ರಲ್ಲಿ ಈ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲು ಯೋಜನೆ ರೂಪಿಸಿದ್ದರು. ಈ ಮೂಲಕ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಸಲು ಚರ್ಚಿಸಲಾಗಿತ್ತು.
4 / 5
ಆದರೀಗ ಈ ತೀರ್ಮಾನವನ್ನು ಬಿಸಿಸಿಐ ಕೈ ಬಿಟ್ಟಿದೆ. ಅಲ್ಲದೆ ಐಪಿಎಲ್ 2025 ರಲ್ಲಿ 74 ಪಂದ್ಯಗಳನ್ನೇ ಆಯೋಜಿಸಲು ನಿರ್ಧರಿಸಲಾಗಿದೆ. ಇದಾಗ್ಯೂ ಐಪಿಎಲ್ 2026 ರಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಐಪಿಎಲ್ನ 19ನೇ ಆವೃತ್ತಿಯಲ್ಲಿ 84 ಪಂದ್ಯಗಳು ನಡೆದರೂ ಅಚ್ಚರಿಪಡಬೇಕಿಲ್ಲ.
5 / 5
ಏಕೆಂದರೆ ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೀಗ ಈ ನಿರ್ಧಾರದಿಂದ ಹಿಂದೆ ಸರಿದಿದರೂ, ಅತ್ತ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಐಪಿಎಲ್ ಪ್ರಸಾರಕ ಸಂಸ್ಥೆಗಳು ಮುಂದಿಟ್ಟಿವೆ. ಹೀಗಾಗಿ ಈ ಬಾರಿ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡದಿದ್ದರೂ, ಐಪಿಎಲ್ 2026 ರಲ್ಲಿ 10 ಮ್ಯಾಚ್ಗಳು ಹೆಚ್ಚಳವಾಗುವುದು ಬಹುತೇಕ ಖಚಿತ ಎನ್ನಬಹುದು.