IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಹುತೇಕ ತಂಡಗಳು 12 ಪಂದ್ಯಗಳನ್ನಾಡಿದ್ದು, ಲೀಗ್ ಹಂತದಲ್ಲಿ ಇನ್ನುಳಿದಿರುವುದು ಕೇವಲ 8 ಮ್ಯಾಚ್ಗಳು ಮಾತ್ರ. ಈ ಎಂಟು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕೂಡ ಒಂದು ಪಂದ್ಯವಾಡಲಿದೆ.
ಪ್ರಸ್ತುತ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಇದಾಗ್ಯೂ 9ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ. ಅಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳಲು ಸಿಎಸ್ಕೆ ಅಮೋಘ ಗೆಲುವು ದಾಖಲಿಸಲೇಬೇಕು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಮೇ 25 ರಂದು ಅಮಹಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಿಎಸ್ಕೆ ತಂಡವು ಭರ್ಜರಿ ಜಯ ಸಾಧಿಸಿದರೆ ಮಾತ್ರ 9ನೇ ಸ್ಥಾನಕ್ಕೇರಬಹುದು. ಅಂದರೆ ಇಲ್ಲಿ ಸಿಎಸ್ಕೆ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಕಲೆಹಾಕಿದರೆ, ಕನಿಷ್ಠ 107 ರನ್ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ.
ಇನ್ನು ಗುಜರಾತ್ ಟೈಟಾನ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 180 ರನ್ಗಳನ್ನು ಕಲೆಹಾಕಿದರೆ, ಈ ಗುರಿಯನ್ನು ಸಿಎಸ್ಕೆ ತಂಡವು ಕೇವಲ 8 ಓವರ್ಗಳಲ್ಲಿ ಚೇಸ್ ಮಾಡಬೇಕು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಬಹುದು.
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾರ್ಮ್ ಗಮನಿಸಿದರೆ, ಇದು ಕಷ್ಟಸಾಧ್ಯ ಎಂದೇ ಹೇಳಬಹುದು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪಡೆಯು ಕೊನೆಯ ಸ್ಥಾನದೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಲಿದೆ. ಅದು ಕೂಡ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳೆದ 15 ಸೀಸನ್ಗಳಲ್ಲಿ ಒಮ್ಮೆಯೂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿಲ್ಲ. ಆದರೆ ಈ ಬಾರಿ ಅಂತಿಮ ಸ್ಥಾನದೊಂದಿಗೆ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಿದೆ.