
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL) ಈವರೆಗೆ ಕೇವಲ ಐವರು ಝಿಂಬಾಬ್ವೆ ಆಟಗಾರರು ಮಾತ್ರ ಆಯ್ಕೆಯಾಗಿದ್ದಾರೆ. ಇವರಲ್ಲಿ ತಾತೆಂಡ ತೈಬು ಮೊದಲಿಗರಾದರೆ, ಬ್ಲೆಸಿಂಗ್ ಮುಝರಬಾನಿ ಕೊನೆಯವರು. ಅಂದರೆ ಈ ಬಾರಿಯ ಐಪಿಎಲ್ನ ಪ್ಲೇಆಫ್ ಪಂದ್ಯಗಳಿಗೆ ಆರ್ಸಿಬಿ ಮುಝರಬಾನಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಇದಕ್ಕೂ ಮುನ್ನ ಐಪಿಎಲ್ನಲ್ಲಿ ಕಾಣಿಸಿಕೊಂಡ ಝಿಂಬಾಬ್ವೆಯ ಆಟಗಾರರ ಪಟ್ಟಿ ಇಲ್ಲಿದೆ...

ತಾತೆಂಡ ತೈಬು: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾದ ಮೊದಲ ಝಿಂಬಾಬ್ವೆ ಆಟಗಾರ ತಾತೆಂಡ ತೈಬು. 2008 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ತೈಬು ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಕೇವಲ 31 ರನ್ಗಳಿಸಲಷ್ಟೇ ಶಕ್ತರಾಗಿದ್ದರು.

ರೇ ಪ್ರಿನ್ಸ್: ಐಪಿಎಲ್ನಲ್ಲಿ ಕಾಣಿಸಿಕೊಂಡ ಝಿಂಬಾಬ್ವೆಯ ಎರಡನೇ ಆಟಗಾರ ರೇ ಪ್ರಿನ್ಸ್. 2011ರ ಹರಾಜಿನ ಮೂಲಕ ಪ್ರಿನ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಅಲ್ಲದೆ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅವರು ಮೂರು ಓವರ್ಗಳನ್ನು ಎಸೆದಿದ್ದರು. ಇದಾಗ್ಯೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಬ್ರೆಂಡನ್ ಟೇಲರ್: ಝಿಂಬಾಬ್ವೆ ತಂಡದ ಸ್ಟಾರ್ ಆಟಗಾರನಾಗಿದ್ದ ಬ್ರೆಂಡನ್ ಟೇಲರ್ 2014 ರಲ್ಲಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದರು. ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಟೇಲರ್ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ.

ಸಿಕಂದರ್ ರಾಝ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಝಿಂಬಾಬ್ವೆ ಆಟಗಾರನ ದಾಖಲೆ ಸಿಕಂದರ್ ರಾಝ ಹೆಸರಿನಲ್ಲಿದೆ. ಐಪಿಎಲ್ 2023 ಮತ್ತು 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ರಾಝ ಒಟ್ಟು 9 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 182 ರನ್ ಕಲೆಹಾಕಿದ್ದಲ್ಲದೆ, 3 ವಿಕೆಟ್ ಪಡೆದು ಮಿಂಚಿದ್ದರು.

ಬ್ಲೆಸಿಂಗ್ ಮುಝರಬಾನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಆರ್ಸಿಬಿ ತಂಡದಲ್ಲಿದ್ದ ಪ್ರಮುಖ ವೇಗಿ ಲುಂಗಿ ಎನ್ಗಿಡಿ ಮೇ 26ರ ಬಳಿಕ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಪ್ಲೇಆಫ್ ಪಂದ್ಯಗಳಿಗೆ ಮುಝರಬಾನಿಯನ್ನು ಆರ್ಸಿಬಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ಈ ಮೂಲಕ ಬ್ಲೆಸಿಂಗ್ ಮುಝರಬಾನಿ ಕೂಡ ಐಪಿಎಲ್ಗೆ ಆಯ್ಕೆಯಾದ ಝಿಂಬಾಬ್ವೆ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.