
ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕಳೆದ ಸೀಸನ್ ಐಪಿಎಲ್ನಲ್ಲೇ ಜಗಜ್ಜಾಹೀರಾಗಿತ್ತು. ಈ ಜಾಹೀರಾಗುವಿಕೆಯನ್ನು ಪುಷ್ಠೀಕರಿಸುವಂತೆ ಇದೀಗ ಒಂದಷ್ಟು ವಿಚಾರಗಳು ಹೊರಬೀಳುತ್ತಿದೆ. ಅದರಲ್ಲೂ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಹೊರ ನಡೆದ ಬೆನ್ನಲ್ಲೇ ತಂಡದ ಇನ್ಸೈಡ್ ವಿಷಯವೊಂದು ಹೊರಬಿದ್ದಿದೆ.

ರಾಜಸ್ಥಾನ್ ರಾಯಲ್ಸ್ ಮೂಲಗಳ ಮಾಹಿತಿ ಪ್ರಕಾರ, ನಾಯಕತ್ವದ ವಿಷಯದಲ್ಲಿ ಫ್ರಾಂಚೈಸಿಯಲ್ಲೇ ಗೊಂದಲ ಏರ್ಪಟ್ಟಿದೆ. ಅಂದರೆ ಮುಂದಿನ ಸೀಸನ್ನಲ್ಲಿ ಯಾರನ್ನು ನಾಯಕರನ್ನಾಗಿಸಬೇಕೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರು ಒಬ್ಬಬ್ಬೊರನ್ನು ನಾಯಕರನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿರುವುದೇ ಸಮಸ್ಯೆ.

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಒಂದು ಗುಂಪು ಪ್ರಸ್ತುತ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರನ್ನೇ ನಾಯಕನಾಗಿ ಮುಂದುವರೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಇದಕ್ಕೆ ಫ್ರಾಂಚೈಸಿಯ ಕೆಲವರಿಂದ ಆಕ್ಷೇಪಣೆಯಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಫ್ರಾಂಚೈಸಿಯ ಒಂದು ಗ್ರೂಪ್ ರಿಯಾನ್ ಪರಾಗ್ ಅವರನ್ನು ನಾಯಕನಾಗಿ ಆಯ್ಕೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪರಾಗ್ ಆಲ್ರೌಂಡರ್ ಆಟಗಾರ, ಭವಿಷ್ಯದ ದೃಷ್ಟಿಯಲ್ಲಿ ಈಗಾಲೇ ನಾಯಕತ್ವ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಅವರು ಮುಂದಿಡುತ್ತಿದ್ದಾರೆ.

ಆರ್ಆರ್ ಫ್ರಾಂಚೈಸಿಯ ಇನ್ನೊಂದು ಗ್ರೂಪ್ ಯಶಸ್ವಿ ಜೈಸ್ವಾಲ್ ಅವರಿಗೆ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದಾರೆ. ಜೈಸ್ವಾಲ್ ಕಳೆದ ಕೆಲ ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭವಿಷ್ಯ ದೃಷ್ಟಿಯಿಂದ ಜೈಸ್ವಾಲ್ಗೆ ಕ್ಯಾಪ್ಟನ್ ಪಟ್ಟ ನೀಡುವುದು ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಹೀಗೆ ನಾಯಕನ ಆಯ್ಕೆ ವಿಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲೇ ಗೊಂದಲ ಏರ್ಪಟ್ಟಿದೆ. ಈ ಗೊಂದಲದೊಂದಿಗೆ ಐಪಿಎಲ್ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.