
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಆಕ್ಷನ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಾಕ್ಸ್ಟಾರ್ ರವೀಂದ್ರ ಜಡೇಜಾ (Ravindra jadeja) ಟ್ರೇಡ್ ಆಗುವುದು ಖಚಿತವಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಗಾಗಿ ಎಂಬುದು ವಿಶೇಷ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಸಿಎಸ್ಕೆ-ಆರ್ಆರ್ ಫ್ರಾಂಚೈಸಿಗಳು ಸ್ವಾಪ್ ಡೀಲ್ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಅಲ್ಲದೆ ಇನ್ನೆರಡು ದಿನಗಳ ಒಳಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಒಪ್ಪಂದ ಅಧಿಕೃತವಾಗಲಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ರವೀಂದ್ರ ಜಡೇಜಾ ಅವರ ಸಿಎಸ್ಕೆ ಪಯಣ ಕೂಡ ಅಂತ್ಯವಾಗಲಿದೆ.

ಕಳೆದ 12 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ರವೀಂದ್ರ ಜಡೇಜಾ ಇದೀಗ ಮತ್ತೆ ತನ್ನ ಮಾಜಿ ತಂಡಕ್ಕೆ ಮರಳುತ್ತಿದ್ದಾರೆ. ಅಂದರೆ ಜಡೇಜಾ 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದರು. ಇದೀಗ 15 ವರ್ಷಗಳ ಬಳಿಕ ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಇನ್ನು 12 ವರ್ಷಗಳಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಪರ 200 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 149 ಇನಿಂಗ್ಸ್ ಆಡಿರುವ ಅವರು 2354 ರನ್ ಕಲೆಹಾಕಿದ್ದಾರೆ. ಇದರ ನಡುವೆ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 3 ಬಾರಿ ಸಿಎಸ್ಕೆ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಜಡೇಜಾ ಪ್ರಮುಖ ಪಾತ್ರವಹಿಸಿದ್ದರು. ಇದೀಗ 12 ವರ್ಷಗಳ ಬಳಿಕ ಚಾಂಪಿಯನ್ ಆಟಗಾರನನ್ನು ಕೈ ಬಿಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.