
ಬೇಬಿ ಮಲಿಂಗ ಖ್ಯಾತಿಯ ಮತೀಶ ಪತಿರಾಣ (Matheesha Pathirana) ಐಪಿಎಲ್ ಸೀಸನ್-19ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಪತಿರಾಣ ಅವರನ್ನು ಇದೇ ಮೊದಲ ಬಾರಿಗೆ ಸಿಎಸ್ಕೆ ಫ್ರಾಂಚೈಸಿ ಬಿಡುಗಡೆ ಮಾಡಿದೆ.

ಅದರಂತೆ ಐಪಿಎಲ್ 2026 ರ ಮಿನಿ ಹರಾಜಿಗಾಗಿ ಮತೀಶ ಪತಿರಾಣ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ಅದು ಕೂಡ 2 ಕೋಟಿ ರೂ. ಮೂಲ ಬೆಲೆಯೊಂದಿಗೆ. ಸ್ಟಾರ್ ಬೌಲರ್ ಎನಿಸಿಕೊಂಡಿರುವ ಶ್ರೀಲಂಕಾ ವೇಗಿ ಗರಿಷ್ಠ ಬೇಸ್ ಪ್ರೈಸ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಮತೀಶ ಪತಿರಾಣ ಮೇಲೆ ಎರಡು ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿರುವುದು. ಸಿಎಸ್ಕೆ ತಂಡದಲ್ಲಿರುವಾಗಲೇ ಕೆಕೆಆರ್ ಫ್ರಾಂಚೈಸಿಯು ಪತಿರಾಣ ಅವರನ್ನು ಟ್ರೇಡ್ ಮಾಡಿಕೊಳ್ಳಲು ತೆರೆಮರೆಯ ಪ್ರಯತ್ನ ನಡೆಸಿತ್ತು. ಇದಾಗ್ಯೂ ಅದು ಸಫಲವಾಗಿರಲಿಲ್ಲ.

ಆದರೆ ಅಚ್ಚರಿ ಎಂಬಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ಮತೀಶ ಪತಿರಾಣ ಅವರನ್ನು ಬಿಡುಗಡೆ ಮಾಡಿದೆ. ಈ ರಿಲೀಸ್ ಹೊರತಾಗಿಯೂ ಸಿಎಸ್ಕೆ ಮತ್ತೆ ಪತಿರಾಣ ಅವರನ್ನು ಖರೀದಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತೀಶ ಪತಿರಾಣಗೆ ನೀಡಿದ್ದು ಬರೋಬ್ಬರಿ 13 ಕೋಟಿ ರೂ. ಈ ಬೃಹತ್ ಮೊತ್ತದ ಕಾರಣದಿಂದಾಗಿ ರಿಲೀಸ್ ಮಾಡಿದ್ದು, ಕಡಿಮೆ ಮೊತ್ತಕ್ಕೆ ಮತ್ತೆ ಖರೀದಿಸಲು ಸಿಎಸ್ಕೆ ಮುಂದಾಗಲಿದೆ.

ಇತ್ತ ಮತೀಶ ಪತಿರಾಣ ರಿಲೀಸ್ ಆಗುತ್ತಿದ್ದಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿಯನ್ನು ಖರೀದಿಸಲು ಪ್ಲ್ಯಾನ್ ರೂಪಿಸುತ್ತಿದೆ ಎಂದು ವರದಿಯಾಗಿದೆ. ಅದರಲ್ಲೂ 64.30 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಕೆಕೆಆರ್ ಮತೀಶ ಪತಿರಾಣಗಾಗಿ ಭರ್ಜರಿ ಪೈಪೋಟಿ ನಡೆಸುವುದಂತು ದಿಟ.

ಏಕೆಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ವೇಗದ ಬೌಲರ್ನ ಅವಶ್ಯಕತೆಯಿದೆ. ಐಪಿಎಲ್ನಲ್ಲಿ ಈಗಾಗಲೇ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿರುವ ಪತಿರಾಣ ಅವರನ್ನು ಖರೀದಿಸುವುದು ಕೆಕೆಆರ್ಗೆ ಕಷ್ಟವೇನಲ್ಲ. ಏಕೆಂದರೆ ಹರಾಜಿನಲ್ಲಿ 64.30 ಕೋಟಿ ರೂ.ನೊಂದಿಗೆ ಕಾಣಿಸಿಕೊಳ್ಳಲಿರುವ ಕೆಕೆಆರ್ ಬೃಹತ್ ಮೊತ್ತದವರೆಗೆ ಬಿಡ್ಡಿಂಗ್ ನಡೆಸುವ ಸಾಧ್ಯತೆಯಿದೆ. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬೇಬಿ ಮಲಿಂಗನನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ ಅಚ್ಚರಿಪಡಬೇಕಿಲ್ಲ.