
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿ ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ ಕಡೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಅದು ಕೂಡ ಬಿಗ್ ಪರ್ಸ್ ಮೊತ್ತದ ಸುದ್ದಿ.

ಹೌದು, ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಒಂದಷ್ಟು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡುವುದು ಖಚಿತ. ಹೀಗೆ ಸ್ಟಾರ್ ಆಟಗಾರರನ್ನು ರಿಲೀಸ್ ಮಾಡಿ ಕೆಕೆಆರ್ ಸುಮಾರು 40 ಕೋಟಿ ರೂ. ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ.

ಅಂದರೆ ಕಳೆದ ಸೀಸನ್ನ ಹರಾಜು ಮೊತ್ತದ ಮೂರನೇ ಒಂದು ಭಾಗದೊಂದಿಗೆ ಈ ಬಾರಿ ಕೆಕೆಆರ್ ಮಿನಿ ಹರಾಜನ್ನು ಎದುರಿಸಲಿದೆ. ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗೆ 120 ಕೋಟಿ ರೂ. ನಿಗದಿ ಮಾಡಲಾಗಿತ್ತು. ಇದೀಗ ಅದರಲ್ಲಿ 80 ಕೋಟಿ ರೂ. ಮೊತ್ತದ ಆಟಗಾರರನ್ನು ಉಳಿಸಿಕೊಳ್ಳಲು ಕೆಕೆಆರ್ ಮುಂದಾಗಿದೆ.

ಇನ್ನುಳಿದ 40 ಕೋಟಿ ರೂ. ಮೊತ್ತದೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡು ಕೆಲ ಪ್ರಮುಖ ಆಟಗಾರರಿಗೆ ಬಿಡ್ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಡಿಸೆಂಬರ್ 15 ರಂದು ನಡೆಯಲಿರುವ ಆಕ್ಷನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇನ್ನು ಮಿನಿ ಹರಾಜಿಗೂ ಮುನ್ನ ಕೆಕೆಆರ್ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯಲ್ಲಿ ವೆಂಕಟೇಶ್ ಅಯ್ಯರ್ (23.75 ಕೋಟಿ ರೂ), ಅನ್ರಿಕ್ ನೋಕಿಯ (6.50 ಕೋಟಿ ರೂ) ಕ್ವಿಂಟನ್ ಡಿಕಾಕ್ (3.6 ಕೋಟಿ ರೂ), ಸೆನ್ಸರ್ ಜಾನ್ಸನ್ (2.8 ಕೋಟಿ ರೂ), ಮೊಯೀನ್ ಅಲಿ (2 ಕೋಟಿ ರೂ) ಹಾಗೂ ರಹಮಾನುಲ್ಲಾ ಗುರ್ಬಾಝ್ (2 ಕೋಟಿ ರೂ) ಹೆಸರುಗಳು ಮುಂಚೂಣಿಯಲ್ಲಿವೆ. ಈ ಆರು ಆಟಗಾರರನ್ನು ಬಿಡುಗಡೆ ಮಾಡಿದರೆ ಕೆಕೆಆರ್ ತಂಡದ ಪರ್ಸ್ ಮೊತ್ತ 40.65 ಕೋಟಿ ರೂ. ಆಗಲಿದೆ.