IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
IPL 2026: ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಂದಿನ ಸೀಸನ್ಗಾಗಿ ಹೊಸ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ಎದುರು ನೋಡುತ್ತಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಆರ್ಆರ್ ಬಳಗದಿಂದ ಹೊರಬರಲು ಬಯಸಿದ್ದಾರೆ. ಹೀಗಾಗಿಯೇ ಇದೀಗ ಸ್ಯಾಮ್ಸನ್ ಮೇಲೆ ಕೆಕೆಆರ್ ಕಣ್ಣಿಟ್ಟಿದೆ.
Updated on: Aug 16, 2025 | 1:56 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸಂಜು ಸ್ಯಾಮ್ಸನ್ (Sanju Samson) ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ? ಎಂಬುದೇ ಈಗ ಕುತೂಹಲ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬರಲು ಸಂಜು ನಿರ್ಧರಿಸಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ ಆರ್ಆರ್ ತಂಡದ ನಾಯಕನನ್ನು ಖರೀದಿಸಲು ಸಿಎಸ್ಕೆ ಫ್ರಾಂಚೈಸಿ ಮುಂದಾಗಿತ್ತು.

ಆದರೆ ಸಂಜು ಸ್ಯಾಮ್ಸನ್ ಟ್ರೇಡ್ಗಾಗಿ ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅಂದರೆ ಸಿಎಸ್ಕೆ ತಂಡದಲ್ಲಿರುವ ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ, ಈ ಮೂವರಲ್ಲಿ ಒಬ್ಬರನ್ನು ನೀಡಿದರೆ ಸಂಜು ಸ್ಯಾಮ್ಸನ್ ಅವರನ್ನು ನೀಡುವುದಾಗಿ ಸಿಎಸ್ಕೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಿಳಿಸಿದೆ.

ಆದರೆ ಇತ್ತ ಸಿಎಸ್ಕೆ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ನಡುವಣ ಟ್ರೇಡ್ ಪ್ರಕ್ರಿಯೆಯು ವಿಫಲವಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಂಗಕ್ಕೆ ಇಳಿದಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ಗಾಗಿ ಇಬ್ಬರು ಆಟಗಾರರನ್ನು ನೀಡಲು ಮುಂದಾಗಿದೆ. ಆ ಇಬ್ಬರು ಆಟಗಾರರೆಂದು ರಮಣ್ದೀಪ್ ಸಿಂಗ್ ಹಾಗೂ ಅಂಗ್ಕ್ರಿಶ್ ರಘುವಂಶಿ. ಕಳೆದ ಕೆಲ ವರ್ಷಗಳಿಂದ ಕೆಕೆಆರ್ ತಂಡದ ಭಾಗವಾಗಿರುವ ರಮಣ್ದೀಪ್ ಹಾಗೂ ಅಂಗ್ಕ್ರಿಶ್ ಅವರನ್ನು ನೀಡುವ ಮೂಲಕ ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೆಕೆಆರ್ ಆಸಕ್ತಿ ತೋರಿದೆ.

ಕೆಕೆಆರ್ ನೀಡಿದ ಈ ಆಫರ್ ಅನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಇನ್ನೂ ಸಹ ತಿರಸ್ಕರಿಸಿಲ್ಲ. ಹೀಗಾಗಿ ಇಬ್ಬರು ಆಟಗಾರರೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡ್ ಕುದುರಿಕೊಳ್ಳುವ ಸಾಧ್ಯತೆಯಿದೆ. ಹೀಗೆ ಟ್ರೇಡ್ ಪ್ರಕ್ರಿಯೆ ಯಶಸ್ವಿಯಾದರೆ ಸಂಜು ಸ್ಯಾಮ್ಸನ್ ಮುಂದಿನ ಸೀಸನ್ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.




