
ದೇಶಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ನಿರಾಸೆಗೊಳಗಾಗಿದ್ದ ಸರ್ಫರಾಜ್ ಖಾನ್‌ಗೆ ಐಪಿಎಲ್ ಮಿನಿ ಹರಾಜಿನಲ್ಲೂ ಆರಂಭದಲ್ಲಿ ಆಘಾತ ಎದುರಾಗಿತ್ತು. ಆದಾಗ್ಯೂ ಕೊನೆಯಲ್ಲಿ ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಖರೀದಿಸುವ ಮೂಲಕ ಅವರ ಐಪಿಎಲ್ ವೃತ್ತಿಜೀವನಕ್ಕೆ ಪುನರ್ಜನ್ಮ ನೀಡಿದೆ.

ಇದರೊಂದಿಗೆ ಎರಡು ವರ್ಷಗಳ ನಂತರ ಸರ್ಫರಾಜ್ ಖಾನ್ ಐಪಿಎಲ್ ಪಂದ್ಯಾವಳಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯ ಬಾರಿಗೆ 2023 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಸರ್ಫರಾಜ್ ಖಾನ್‌ಗೆ ಆ ಬಳಿಕ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿದೆ. ಆದಾಗ್ಯೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಪಂದ್ಯಾವಳಿ ಆರಂಭವಾದ ಬಳಿಕವಷ್ಟೇ ತಿಳಿಯಲಿದೆ.

ಆದಾಗ್ಯೂ ತನ್ನ ಐಪಿಎಲ್ ವೃತ್ತಿಜೀವನಕ್ಕೆ ಪುನರ್ಜನ್ಮ ನೀಡಿರುವ ಸಿಎಸ್‌ಕೆ ಫ್ರಾಂಚೈಸಿಗೆ ಧನ್ಯವಾದ ತಿಳಿಸಿರುವ ಸರ್ಫರಾಜ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನನಗೆ ಹೊಸ ಜೀವನವನ್ನು ನೀಡಿದ ಸಿಎಸ್‌ಕೆ ಫ್ರಾಂಚೈಸಿಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

2015 ರಲ್ಲಿ ಆರ್‌ಸಿಬಿ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್, 2016 ಮತ್ತು 2018 ರ ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆಡಿದ್ದರು. ಆ ಬಳಿಕ 2019 ರಲ್ಲಿ ಪಂಜಾಬ್ ಕಿಂಗ್ಸ್ ಸೇರಿದ ಸರ್ಫರಾಜ್, ಎರಡು ವರ್ಷಗಳ ಕಾಲ ಈ ಫ್ರಾಂಚೈಸಿ ಪರ ಆಡಿದ್ದರು. ನಂತರ 2022 ರ ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್ ಸೇರಿದ ಸರ್ಫರಾಜ್, ಎರಡು ವರ್ಷಗಳ ಕಾಲ ಈ ಫ್ರಾಂಚೈಸಿ ಪರ ಆಡಿದ್ದರು. ಆದಾಗ್ಯೂ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನು ಹರಾಜಿಗೂ ಮುನ್ನವೇ ತಂಡದಿಂದ ಕೈಬಿಡಲಾಗಿತ್ತು.

ಐಪಿಎಲ್‌ನಲ್ಲಿ ಇದುವರೆಗೆ 50 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಸರ್ಫರಾಜ್ ಖಾನ್, 585 ರನ್ ಬಾರಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ಸರ್ಫರಾಜ್ ಖಾನ್ ಐಪಿಎಲ್ 2019 ರಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 180 ರನ್ ಕಲೆಹಾಕಿದ್ದರು. ಅವರ ಏಕೈಕ ಅರ್ಧಶತಕ ಕೂಡ ಈ ಆವೃತ್ತಿಯಲ್ಲೇ ಬಂದಿತ್ತು.

ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ಸರ್ಫರಾಜ್ ಖಾನ್, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ಮೂರು ಅರ್ಧಶತಕ ಮತ್ತು ಒಂದು ಶತಕ ಕೂಡ ಬಾರಿಸಿದ್ದಾರೆ. ಇದರಲ್ಲಿ ರಾಜಸ್ಥಾನ ವಿರುದ್ಧ ಕೇವಲ 22 ಎಸೆತಗಳಲ್ಲಿ 73 ರನ್ ಗಳಿಸಿದ ಇನ್ನಿಂಗ್ಸ್ ಕೂಡ ಸೇರಿದೆ. ಈ ಇನ್ನಿಂಗ್ಸ್‌ನಲ್ಲಿ, ಅವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.