
IPL 2026: ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ ಡಬಲ್ ಹೆಡ್ಡರ್ ಪಂದ್ಯಗಳಿಂದ ಇಬ್ಬರು ನಾಯಕರುಗಳು ಹೊರಗುಳಿದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅಲಭ್ಯರಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಈ ಇಬ್ಬರು ನಾಯಕರುಗಳು ಅಲಭ್ಯರಾಗಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ...

ಹಾರ್ದಿಕ್ ಪಾಂಡ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿಲ್ಲ. ಟಾಸ್ ವೇಳೆ ಮಾತನಾಡಿದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಅವರು ಅನಾರೋಗ್ಯದಿಂದ (Illness) ಬಳಲುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಶುಭ್‌ಮನ್ ಗಿಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಸ್ನಾಯು ಸೆಳೆತಕ್ಕೆ (Muscle Spasm) ಒಳಗಾದ ಕಾರಣ ಆಡಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ತಂಡವನ್ನು ಮುನ್ನಡೆಸಿದರು. ಗಿಲ್ ಬದಲಿಗೆ ಯುವ ಆಟಗಾರ ಕುಮಾರ್ ಕುಶಾಗ್ರ ಪದಾರ್ಪಣೆ ಮಾಡುವ ಅವಕಾಶ ಪಡೆದರು.

ಇಬ್ಬರೂ ನಾಯಕರ ಅನ್ಫಿಟ್ ಸಮಸ್ಯೆ ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ. ಏಪ್ರಿಲ್ 8 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಶುಭ್‌ಮನ್ ಗಿಲ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಕೂಡ ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಭರವಸೆ ವ್ಯಕ್ತಪಡಿಸಿದೆ.

ಇನ್ನು ಐಪಿಎಲ್ 2026ರ ಮೊದಲ ಡಬಲ್ ಹೆಡ್ಡರ್ನಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಅತ್ತ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಯುವ ಪಡೆಯನ್ನು ಒಳಗೊಂಡ ರಾಜಸ್ಥಾನ್ ರಾಯಲ್ಸ್ ಕೂಡ ಯಶಸ್ವಿಯಾಗಿದೆ.