
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಪ್ರಮುಖ ವೇಗಿಯೊಬ್ಬರು ಹೊರಬೀಳುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಆಟಗಾರನ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರದ ಆರೋಪಗಳು.

ಹೌದು, ಆರ್ಸಿಬಿ ತಂಡದ ಎಡಗೈ ವೇಗಿ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉತ್ತರ ಪ್ರದೇಶದ ಗಾಝಿಯಾಬಾದ್ ಠಾಣೆಯಲ್ಲಿ ದಯಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತ ಎಫ್ಐಆರ್ ದಾಖಲಾಗಿರುವ ಕಾರಣ ಯಶ್ ದಯಾಳ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.

ಯಶ್ ದಯಾಳ್ ಅವರು ಮದುವೆಯ ಆಮಿಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಇತ್ತೀಚೆಗಷ್ಟೇ ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದರು.

ಇದರ ಜೊತೆಗೆ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೂಡ ಯಶ್ ದಯಾಳ್ ವಿರುದ್ಧ ಕೇಳಿ ಬಂದಿದೆ. ಹೀಗಾಗಿಯೇ ಯಶ್ ದಯಾಳ್ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಯುಪಿ ಟಿ20 ಲೀಗ್ನಿಂದ ಹೊರಗಿಟ್ಟಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಗೂ ಆಯ್ಕೆ ಮಾಡಿಲ್ಲ.

ಅತ್ತ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯಶ್ ದಯಾಳ್ ಮೇಲೆ ನಿಷೇಧ ಹೇರಿರುವ ಕಾರಣ ಅವರು ಮುಂಬರುವ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಎಡಗೈ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೈ ಬಿಡಲಿದೆ ಎಂದು ವರದಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಝಲ್ವುಡ್, ರಾಸಿಖ್ ಸಲಾಂ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.
Published On - 7:07 am, Tue, 11 November 25