
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಯಾಗಿ ಇಶಾನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

ಇಶಾನ್ ಕಿಶನ್ ಈ ಹಿಂದೆ ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 3 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ಒಂದು ಅರ್ಧಶತಕದೊಂದಿಗೆ 78 ರನ್ ಕಲೆಹಾಕಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಈ ಸರಣಿಯ ಬಳಿಕ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.

ಅಲ್ಲದೆ 2023ರ ಬಳಿಕ ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಇದೀಗ 2 ವರ್ಷಗಳ ಬಳಿಕ ಯುವ ಎಡಗೈ ದಾಂಡಿಗನಿಗೆ ಭಾರತ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ. ಅದರಂತೆ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಶಾನ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಜುಲೈ 31 ರಿಂದ ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ಧ್ರುವ್ ಜುರೇಲ್ ಜೊತೆ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅನ್ಶುಲ್ ಕಂಬೋಜ್.
Published On - 1:55 pm, Thu, 24 July 25