- Kannada News Photo gallery Cricket photos Jasprit Bumrah might be rested for the Test series vs Bangladesh
Jasprit Bumrah: ಜಸ್ಪ್ರೀತ್ ಬುಮ್ರಾಗೆ ಮತ್ತೆ ರೆಸ್ಟ್..!
India vs Bangladesh: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ, ಸೆಪ್ಟೆಂಬರ್ 27 ರಂದು ಕಾನ್ಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆದರೆ ಈ ಪಂದ್ಯಗಳಲ್ಲಿ ಬುಮ್ರಾ ಕಾಣಿಸಿಕೊಳ್ಳುವುದು ಅನುಮಾನ.
Updated on: Aug 12, 2024 | 12:08 PM

ಭಾರತದ ಮುಂಬರುವ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಕಾಣಿಸಿಕೊಳ್ಳುವುದು ಅನುಮಾನ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿಯ ವೇಳೆ ಬುಮ್ರಾ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಚಿಂತಿಸಿದೆ. ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಯಿಂದಲೂ ಟೀಮ್ ಇಂಡಿಯಾ ವೇಗಿ ಹೊರಗುಳಿಯುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಜಸ್ಪ್ರೀತ್ ಬುಮ್ರಾ ಯಾವುದೇ ಪಂದ್ಯವಾಡಿಲ್ಲ. ಝಿಂಬಾಬ್ವೆ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಬುಮ್ರಾಗೆ ಶ್ರೀಲಂಕಾ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿರಿಸಿ ಅವರಿಗೆ ಮತ್ತೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮುಂದಾಗಿದೆ.

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಈ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದ್ದು, ಹೀಗಾಗಿ ನ್ಯೂಝಿಲೆಂಡ್ ಸರಣಿ ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

ಹಾಗೆಯೇ ನ್ಯೂಝಿಲೆಂಡ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ 5 ಪಂದ್ಯಗಳನ್ನಾಡಬೇಕಿದೆ. ಅಂದರೆ ಮುಂದಿನ 8 ಟೆಸ್ಟ್ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಬೇಕಿದ್ದು, ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

ಅದರಂತೆ ಅಕ್ಟೋಬರ್ 16 ರಿಂದ ಶುರುವಾಗಲಿರುವ ನ್ಯೂಝಿಲೆಂಡ್ ವಿರುದ್ದದ ಸರಣಿಯ ಮೂಲಕ ಜಸ್ಪ್ರೀತ್ ಬುಮ್ರಾ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಇತ್ತ ಬುಮ್ರಾ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಈಗಾಗಲೇ ಅಭ್ಯಾಸವನ್ನು ಸಹ ಶುರು ಮಾಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಅನ್ನು ಎದುರು ನೋಡಬಹುದು.
