ಇಂಗ್ಲೆಂಡ್ ತಂಡಕ್ಕೆ ಸ್ಫೋಟಕ ದಾಂಡಿಗ ಎಂಟ್ರಿ..!
Jordan Cox: ಈ ಬಾರಿಯ ದಿ ಹಂಡ್ರೆಡ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಓವಲ್ ಇನ್ವಿನ್ಸಿಬಲ್ಸ್. ಸ್ಯಾಮ್ ಬಿಲ್ಲಿಂಗ್ಸ್ ನಾಯಕತ್ವದ ಓವಲ್ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು 24 ವರ್ಷದ ಯುವ ದಾಂಡಿಗ ಜೋರ್ಡನ್ ಕಾಕ್ಸ್. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಕಾಕ್ಸ್ಗೆ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಲಭಿಸಿದೆ.
Updated on: Sep 04, 2025 | 8:24 AM

ಇಂಗ್ಲೆಂಡ್ ಟಿ20 ತಂಡಕ್ಕೆ ಸ್ಫೋಟಕ ದಾಂಡಿಗ ಜೋರ್ಡನ್ ಕಾಕ್ಸ್ (Jordan Cox ) ಎಂಟ್ರಿ ಕೊಟ್ಟಿದ್ದಾರೆ. ದಿ ಹಂಡ್ರೆಡ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ ಕಾಕ್ಸ್ ಅವರನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಹೆಸರಿಸಲಾದ 14 ಸದಸ್ಯರ ತಂಡದಲ್ಲಿ ಕಾಕ್ಸ್ ಇರಲಿಲ್ಲ.

ಆದರೆ ಈ ಬಾರಿಯ ದಿ ಹಂಡ್ರೆಡ್ ಲೀಗ್ನಲ್ಲಿ ಜೋರ್ಡನ್ ಕಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಓವಲ್ ಇನ್ವಿನ್ಸಿಬಲ್ಸ್ ಪರ ಕಣಕ್ಕಿಳಿದಿದ್ದ ಕಾಕ್ಸ್ 9 ಇನಿಂಗ್ಸ್ಗಳಿಂದ 3 ಭರ್ಜರಿ ಅರ್ಧಶತಕಗಳೊಂದಿಗೆ ಬರೋಬ್ಬರಿ 367 ರನ್ ಕಲೆಹಾಕಿದ್ದರು.

ಈ ಭರ್ಜರಿ ಪ್ರದರ್ಶನೊಂದಿಗೆ ದಿ ಹಂಡ್ರೆಡ್ ಲೀಗ್ 2025 ರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಜೋರ್ಡನ್ ಕಾಕ್ಸ್ ತಮ್ಮದಾಗಿಸಿಕೊಂಡಿದ್ದರು. ಕುತೂಹಲಕಾರಿ ವಿಷಯ ಎಂದರೆ ಈ 9 ಇನಿಂಗ್ಸ್ಗಳಿಂದ ಕಾಕ್ಸ್ ಬ್ಯಾಟ್ನಿಂದ ಮೂಡಿಬಂದಿರುವುದು ಬರೋಬ್ಬರಿ 22 ಸಿಕ್ಸ್ ಹಾಗೂ 30 ಫೋರ್ಗಳು.

ಜೋರ್ಡನ್ ಕಾಕ್ಸ್ ಅವರನ್ನು ಹೊರತುಪಡಿಸಿ ಈ ಬಾರಿಯ ಟೂರ್ನಿಯಲ್ಲಿ ಯಾವುದೇ ಬ್ಯಾಟರ್ 300 ಕ್ಕಿಂತ ಅಧಿಕ ರನ್ ಕಲೆಹಾಕಿಲ್ಲ. ಅಲ್ಲದೆ ಯಾವುದೇ ಬ್ಯಾಟ್ಸ್ಮನ್ 20 ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿಲ್ಲ. ಹೀಗಾಗಿಯೇ ದೇಶೀಯ ಅಂಗಳದಲ್ಲಿ ಅಬ್ಬರಿಸಿದ ಜೋರ್ಡನ್ ಕಾಕ್ಸ್ಗೆ ಇಂಗ್ಲೆಂಡ್ ತಂಡಕ್ಕೆ ಬುಲಾವ್ ನೀಡಲಾಗಿದೆ.

ಅದರಂತೆ ಸೆಪ್ಟೆಂಬರ್ 17 ರಿಂದ ಶುರುವಾಗಲಿರುವ ಇಂಗ್ಲೆಂಡ್-ಐರ್ಲೆಂಡ್ ನಡುವಣ 3 ಪಂದ್ಯಗಳ ಟಿ20 ಸರಣಿಯಲ್ಲಿ ಜೋರ್ಡನ್ ಕಾಕ್ಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ 24 ವರ್ಷದ ಯುವ ದಾಂಡಿಗ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

ಇಂಗ್ಲೆಂಡ್ ಟಿ20 ತಂಡ: ಜೇಕಬ್ ಬೆಥೆಲ್ (ನಾಯಕ), ರೆಹಾನ್ ಅಹ್ಮದ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್, ಜೋರ್ಡನ್ ಕಾಕ್ಸ್.
