- Kannada News Photo gallery Cricket photos PAK vs ENG: Kamran Ghulam Hits Record Breaking Century against England
ಬಾಬರ್ ಸ್ಥಾನದಲ್ಲಿ ಕಣಕ್ಕಿಳಿದ, ಶತಕ ಸಿಡಿಸಿದ, ದಾಖಲೆ ಬರೆದ
Kamran Ghulam Records: ಕಳೆದ 18 ಇನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿದ ಬಾಬರ್ ಆಝಂ ಅವರನ್ನು ಪಾಕಿಸ್ತಾನ್ ಟೆಸ್ಟ್ ತಂಡದಿಂದ ಕೈ ಬಿಡಲಾಗಿದೆ. ಅವರ ಸ್ಥಾನದಲ್ಲಿ ಚೊಚ್ಚಲ ಅವಕಾಶ ಪಡೆದ ಕಮ್ರಾನ್ ಗುಲಾಮ್ ಇದೀಗ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
Updated on: Oct 16, 2024 | 10:03 AM

ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಸ್ಥಾನದಲ್ಲಿ ಅವಕಾಶ ಪಡೆದ ಕಮ್ರಾನ್ ಗುಲಾಮ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅದು ಸಹ ಬಲಿಷ್ಠ ಇಂಗ್ಲೆಂಡ್ ವೇಗಿಗಳನ್ನು ಎದುರಿಸುವ ಮೂಲಕ ಎಂಬುದು ವಿಶೇಷ. ಮುಲ್ತಾನ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಶಾನ್ ಮಸೂದ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಕೇವಲ 7 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಮಸೂದ್ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ಕಮ್ರಾನ್ ಗುಲಾಮ್ ಅತ್ಯುತ್ತಮ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು.

ಇಂಗ್ಲೆಂಡ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಕಮ್ರಾನ್ 192 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಪಾಕಿಸ್ತಾನ್ ಪರ ಚೊಚ್ಚಲ ಟೆಸ್ಟ್ನಲ್ಲಿ ಶತಕ ಬಾರಿಸಿದ 13ನೇ ಆಟಗಾರ ಎನಿಸಿಕೊಂಡರು. ಅಲ್ಲದೆ ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸಿದ ಪಾಕಿಸ್ತಾನದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹಾಗೆಯೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. ಇದರ ಜೊತೆಗೆ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಪಾಕಿಸ್ತಾನದ ಎರಡನೇ ಹಿರಿಯ ಆಟಗಾರ ಎನಿಸಿಕೊಂಡರು. ತಮ್ಮ 29ನೇ ವಯಸ್ಸಿನಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡುವ ಮೂಲಕ ಕಮ್ರಾನ್ ಗುಲಾಮ್ ಈ ಸಾಧನೆ ಮಾಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಕಮ್ರಾನ್ ಗುಲಾಮ್ 224 ಎಸೆತಗಳನ್ನು ಎದುರಿ 11 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 118 ರನ್ ಬಾರಿಸಿದರು. ಈ ಶತಕದ ನೆರವಿನಿಂದ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿದ್ದಾರೆ.
























