
ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕೇನ್ ವಿಲಿಯಮ್ಸನ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ನ ಫ್ಯಾಬುಲಸ್ ಫೋರ್ ಎಂದೇ ಗುರುತಿಸಿಕೊಂಡಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಕೇನ್ ಅಗ್ರಸ್ಥಾನಕ್ಕೇರಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್ನ ಟೆಸ್ಟ್ ಕ್ರಿಕೆಟ್ನ ಫ್ಯಾಬುಲಸ್ ಫೋರ್ ಬ್ಯಾಟರ್ಗಳಾಗಿ ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಇಂಗ್ಲೆಂಡ್ನ ಜೋ ರೂಟ್ ಹಾಗೂ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ ಗುರುತಿಸಿಕೊಂಡಿದ್ದಾರೆ. ಇವರಲ್ಲಿ ಇದೀಗ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ಬ್ಯಾಟರ್ ಆಗಿ ವಿಲಿಯಮ್ಸನ್ ಮೊದಲ ಸ್ಥಾನಕ್ಕೇರಿದ್ದಾರೆ.

ನ್ಯೂಝಿಲೆಂಡ್ ಪರ 172 ಟೆಸ್ಟ್ ಇನಿಂಗ್ಸ್ ಆಡಿರುವ ಕೇನ್ ವಿಲಿಯಮ್ಸನ್ ಇದುವರೆಗೆ 32 ಶತಕಗಳನ್ನು ಬಾರಿಸಿದ್ದಾರೆ. ಈ ಶತಕಗಳೊಂದಿಗೆ ಟೆಸ್ಟ್ನಲ್ಲಿ 8666 ರನ್ ಕಲೆಹಾಕಿದ್ದಾರೆ. ಈ ಮೂಲಕ ಫ್ಯಾಬ್-4 ಶತಕಗಳ ಸರದಾರರ ಪಟ್ಟಿಯಲ್ಲಿ ಕೇನ್ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್. 191 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಮಿತ್ ಒಟ್ಟು 32 ಶತಕಗಳನ್ನೇ ಬಾರಿಸಿದ್ದಾರೆ. ಆದರೆ ಕೇನ್ ವಿಲಿಯಮ್ಸನ್ಗಿಂತ ಹೆಚ್ಚಿನ ಇನಿಂಗ್ಸ್ ಆಡಿರುವ ಕಾರಣ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 252 ಟೆಸ್ಟ್ ಇನಿಂಗ್ಸ್ ಆಡಿರುವ ರೂಟ್ ಇದುವರೆಗೆ 30 ಶತಕಗಳನ್ನು ಬಾರಿಸಿದ್ದಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ 191 ಟೆಸ್ಟ್ ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಇದುವರೆಗೆ 29 ಶತಕಗಳನ್ನು ಸಿಡಿಸಿದ್ದಾರೆ.

ವಿಶೇಷ ಎಂದರೆ ಕಳೆದ ವರ್ಷ 4ನೇ ಸ್ಥಾನದಲ್ಲಿದ್ದ ಕೇನ್ ವಿಲಿಯಮ್ಸನ್ ಕೊನೆಯ 7 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 7 ಸೆಂಚುರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಎಲ್ಲರನ್ನು ಹಿಂದಿಕ್ಕಿ ಫ್ಯಾಬುಲಸ್ ಫೋರ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.