ಪಾಕ್ ಪಿಚ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇಶವ್ ಮಹಾರಾಜ್
Pakistan vs South Africa: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ 333 ರನ್ಗಳಿಗೆ ಆಲೌಟ್ ಆಗಿದೆ. ಹೀಗೆ ಮೂರಂಕಿ ಮೊತ್ತಕ್ಕೆ ಪಾಕ್ ಪಡೆ ಆಲೌಟ್ ಆಗಲು ಮುಖ್ಯ ಕಾರಣ ಸೌತ್ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್.
Updated on: Oct 22, 2025 | 7:59 AM

ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಪಿನ್ ಮೋಡಿ ಮಾಡುವ ಮೂಲಕ ಕೇಶವ್ ಮಹಾರಾಜ್ (Keshav Maharaj ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 7 ವಿಕೆಟ್ಗಳೊಂದಿಗೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಶಾನ್ ಮಸೂದ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಬ್ಯಾಟರ್ಗಳ ಪಾಲಿಗೆ ಕೇಶವ್ ಮಹಾರಾಜ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದಾರೆ. ಸೌತ್ ಆಫ್ರಿಕಾದ ಇತರೆ ಬೌಲರ್ಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಾಕ್ ಬ್ಯಾಟರ್ಗಳು ಕೇಶವ್ ಮಹಾರಾಜ್ಗೆ ಮಾತ್ರ ವಿಕೆಟ್ ಒಪ್ಪಿಸುತ್ತಾ ಸಾಗಿದ್ದಾರೆ. ಪರಿಣಾಮ ಪಾಕ್ ತಂಡವು ಮೊದಲ ಇನಿಂಗ್ಸ್ನಲ್ಲಿ 333 ರನ್ಗಳಿಗೆ ಆಲೌಟ್ ಆಗಿದೆ.

ಸೌತ್ ಆಫ್ರಿಕಾ ಪರ 42.4 ಓವರ್ಗಳನ್ನು ಎಸೆದ ಕೇಶವ್ ಮಹಾರಾಜ್ 102 ರನ್ ನೀಡುವ ಮೂಲಕ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನ್ ಪಿಚ್‌ನಲ್ಲಿ ಏಳು ವಿಕೆಟ್ ಉರುಳಿಸಿದ ಸೌತ್ ಆಫ್ರಿಕಾದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಸೌತ್ ಆಫ್ರಿಕಾ ಪರ ಏಷ್ಯಾ ಪಿಚ್‌ನಲ್ಲಿ ಎರಡು ಬಾರಿ 7 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಕೇಶವ್ ಮಹಾರಾಜ್ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ನಲ್ಲಿ 129 ರನ್ ನೀಡಿ 9 ವಿಕೆಟ್ ಕಬಳಿಸಿದ್ದರು. ಇದೀಗ ಪಾಕಿಸ್ತಾನ್ ವಿರುದ್ಧ 102 ರನ್ಗೆ 7 ವಿಕೆಟ್ ಉರುಳಿಸಿ, ಏಷ್ಯಾದಲ್ಲಿ ಎರಡು ಬಾರಿ 7 ವಿಕೆಟ್ ಪಡೆದ ಸೌತ್ ಆಫ್ರಿಕಾದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಪಾಕಿಸ್ತಾನ್ ಪಿಚ್‌ನಲ್ಲಿ ಅತೀ ಕಡಿಮೆ ರನ್ ನೀಡಿ 7 ವಿಕೆಟ್ ಕಬಳಿಸಿದ ಸೌತ್ ಆಫ್ರಿಕಾ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಪೌಲ್ ಆ್ಯಡಂಸ್ ಹೆಸರಿನಲ್ಲಿತ್ತು. 2003 ರಲ್ಲಿ ಲಾಹೋರ್ನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಪೌಲ್ 128 ರನ್ ನೀಡಿ 7 ವಿಕೆಟ್ ಕಬಳಿಸಿದ್ದರು. ಇದೀಗ 102 ರನ್ಗಳಿಗೆ 7 ವಿಕೆಟ್ ಉರುಳಿಸಿ ಕೇಶವ್ ಮಹಾರಾಜ್ ಪಾಕ್ ಪಿಚ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.




