
ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಇದೀಗ ಉಭಯ ತಂಡಗಳ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಸಮೀಪದಲ್ಲಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಕೇವಲ 11 ರನ್ ಬಾರಿಸಿದರೆ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ಇದುವರೆಗೆ 12 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ಇದುವರೆಗೆ 989 ರನ್ ಬಾರಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್ ನೆಲದಲ್ಲಿ 1000 ರನ್ ಪೂರೈಸಲು 11 ರನ್‌ಗಳ ಅಗತ್ಯವಿದೆ. ಇಲ್ಲಿಯವರೆಗೆ ಇಂಗ್ಲೆಂಡ್‌ನಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಮಾತ್ರ 1000 ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಇದೀಗ ಈ ಪಟ್ಟಿಗೆ ರಾಹುಲ್ ಸೇರ್ಪಡೆಗೊಳ್ಳಲಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್‌ನಲ್ಲಿ 17 ಪಂದ್ಯಗಳನ್ನಾಡಿದ್ದು, 54.31 ಸರಾಸರಿಯಲ್ಲಿ 1575 ರನ್ ಕಲೆಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿವೆ. ಹಾಗೆಯೇ 13 ಪಂದ್ಯಗಳಲ್ಲಿ 68.8 ಸರಾಸರಿಯಲ್ಲಿ 1376 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಕೂಡ ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಗಳಿಸಿದ್ದಾರೆ. ಆಂಗ್ಲರ ನೆಲದಲ್ಲಿ 16 ಪಂದ್ಯಗಳನ್ನಾಡಿರುವ ಅವರು 41.14 ಸರಾಸರಿಯಲ್ಲಿ 1152 ರನ್ ಗಳಿಸಿದ್ದಾರೆ. ಪ್ರಸ್ತುತ 989 ರನ್ ಕಲೆಹಾಕಿರುವ ರಾಹುಲ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 15 ಟೆಸ್ಟ್‌ಗಳಲ್ಲಿ 33.65 ಸರಾಸರಿಯಲ್ಲಿ 976 ರನ್ ಗಳಿಸಿದ್ದಾರೆ.

ಇನ್ನು ಈ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ 62.50 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ರಾಹುಲ್ ಎರಡು ಶತಕಗಳನ್ನು ಬಾರಿಸಿದ್ದಾರೆ. ಇದು ಮಾತ್ರವಲ್ಲದೆ, ಅವರ ಹೆಸರಿನಲ್ಲಿ ಅರ್ಧಶತಕವೂ ಇದೆ.