- Kannada News Photo gallery Cricket photos Kuldeep Yadav Marriage: Star Spinner Requests BCCI Leave, May Miss SA Test
ಟೆಸ್ಟ್ ಸರಣಿಯ ನಡುವೆ ಬಿಸಿಸಿಐ ಬಳಿ ರಜೆ ಕೋರಿ ಅರ್ಜಿ ಹಾಕಿದ ಕುಲ್ದೀಪ್ ಯಾದವ್
Kuldeep Yadav Marriage: ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ನವೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಡುವೆ ಬಿಸಿಸಿಐ ಬಳಿ ರಜೆ ಕೋರಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಬಾಲ್ಯದ ಗೆಳತಿ ವಂಶಿಕಾ ಅವರನ್ನು ಕುಲ್ದೀಪ್ ವರಿಸುತ್ತಿದ್ದು, ಬಿಸಿಸಿಐನಿಂದ ಅನುಮತಿಗಾಗಿ ಕಾಯುತ್ತಿದ್ದಾರೆ.
Updated on: Nov 14, 2025 | 10:11 AM

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯುತ್ತಿದ್ದು, ಇದರಲ್ಲಿ ಕುಲ್ದೀಪ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲೂ ಆಯ್ಕೆ ಮಾಡಲಾಗಿದೆ. ಈ ಸರಣಿಯ ನಡುವೆಯೇ ಕುಲ್ದೀಪ್, ಬಿಸಿಸಿಐ ಬಳಿ ರಜೆ ಕೋರಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ವಾಸ್ತವವಾಗಿ ಕುಲ್ದೀಪ್ ಯಾದವ್ ಈ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತಿದ್ದು, ಈ ಕಾರಣಕ್ಕಾಗಿ ಅವರು ಬಿಸಿಸಿಐ ಬಳಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಜೂನ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕುಲ್ದೀಪ್, ಇದೀಗ ಬಿಸಿಸಿಐನಿಂದ ಗ್ರೀನ್ ಸಿಗ್ನಲ್ಗಾಗಿ ಕಾಯುತಿದ್ದು, ಇಷ್ಟರಲ್ಲೇ ಹಸೆಮಣೆ ಏರಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕುಲ್ದೀಪ್ ಯಾದವ್ ನವೆಂಬರ್ ಕೊನೆಯ ವಾರದಲ್ಲಿ ರಜೆ ಕೋರಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಗುವಾಹಟಿ ಟೆಸ್ಟ್ ನವೆಂಬರ್ 22 ರಂದು ಆರಂಭವಾಗಲಿದೆ. ಕುಲ್ದೀಪ್ ಅವರ ರಜೆ ಕೋರಿಕೆಗೆ ಬಿಸಿಸಿಐ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕುಲ್ದೀಪ್ ಅವರ ವಿವಾಹ ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ. ತಂಡದ ಆಡಳಿತ ಮಂಡಳಿಯು ಅವರಿಗೆ ರಜೆಯನ್ನು ನೀಡುವ ಮೊದಲು ಅವರ ಸೇವೆಗಳು ಯಾವಾಗ ಬೇಕಾಗುತ್ತವೆ ಎಂಬುದನ್ನು ನಿರ್ಣಯಿಸುತ್ತದೆ ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ವರದಿ ತಿಳಿಸಿದೆ. ನವೆಂಬರ್ ಕೊನೆಯ ವಾರದಲ್ಲಿ ವಿವಾಹ ನಡೆಯುವುದು ಖಚಿತ, ಆದರೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

ವಾಸ್ತವವಾಗಿ ಈ ವರ್ಷದ ಆರಂಭದಲ್ಲಿಯೇ ಕುಲ್ದೀಪ್ ಯಾದವ್ ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು, ಆದರೆ ಐಪಿಎಲ್‌ನ ಅಂತಿಮ ಹಂತದ ವಿಳಂಬದಿಂದಾಗಿ ಅವರು ವಿವಾಹವನ್ನು ಮುಂದೂಡಿದ್ದರು. ಇನ್ನು ಕುಲ್ದೀಪ್ ಯಾದವ್ ವರಿಸುತ್ತಿರುವ ವಂಶಿಕಾ, ಅವರ ಬಾಲ್ಯದ ಗೆಳತಿಯಾಗಿದ್ದು, ಪ್ರಸ್ತುತ LIC ಯಲ್ಲಿ ಕೆಲಸ ಮಾಡುತ್ತಿದ್ದಾರೆ.
